ಮಗಳ ಪ್ರಿಯಕರನ ಜೊತೆಗೆ ಸೇರಿ ಅಳಿಯನ ಕತೆನೇ ಮುಗಿಸಿದ ತಾಯಿ, ತಮ್ಮ!
ತುಮಕೂರು, ಏಪ್ರಿಲ್ 19: ಮಗಳ ಸಾವಿನ ನಂತರ ಆಕೆಯ ಪ್ರಿಯಕರನೊಂದಿಗೆ ಸೇರಿ ಆಕೆಯ ಪತಿಯನ್ನು ತಾಯಿ ಹಾಗೂ ತಮ್ಮ ಹತ್ಯೆಗೈದ ಘಟನೆ ತುಮಕೂರಿನ (Tumakuru) ಮಧುಗಿರಿ ತಾಲ್ಲೂಕಿನ ದಂಡೀಪುರ ಗ್ರಾಮದಲ್ಲಿ ನಡೆದಿದೆ. 32 ವರ್ಷದ ನರಸಿಂಹಮೂರ್ತಿ ಕೊಲೆಯಾದ ವ್ಯಕ್ತಿ. ಹೆಂಡತಿ ಸುಜಾತಾಳ ಸಾವಿನ ಬಳಿಕ ಮದ್ಯವ್ಯಸನಿಯಾಗಿದ್ದ ಈತ, ಆಕೆಯ ಪ್ರಿಯಕರ ಆಗಾಗ ಮನೆಗೆ ಬಂದು ಹೋಗುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ. ಇದನ್ನೇ ನೆಪವಾಗಿಸಿಕೊಂಡ ಸುಜಾತಾಳ ತಾಯಿ, ತಮ್ಮ ಹಾಗೂ ಪ್ರಿಯಕರ, ನರಸಿಂಹಮೂರ್ತಿಯನ್ನು ಕೊಲೆಗೈದಿದ್ದಾರೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. ಈ ಹಿನ್ನೆಲೆ ಕೊಡಿಗೇನಹಳ್ಳಿ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.
ಸುಜಾತಾಳ ಗಂಡು ಮಗು ತನ್ನದೆಂದು ಭಾವಿಸಿದ್ದ ಆಕೆಯ ಪ್ರಿಯಕರ
ಕೆಲ ವರ್ಷಗಳ ಹಿಂದೆ ನರಸಿಂಹಮೂರ್ತಿ ಸುಜಾತಾಳನ್ನು ಪ್ರೀತಿಸಿ ಕುಟುಂಬದವರ ಒಪ್ಪಿಗೆ ಪಡೆದು ವಿವಾಹವಾಗಿದ್ದ. ಮದುವೆಯ ನಂತರ ಸುಜಾತ ಗಾರ್ಮೆಂಟ್ಸ್ ಉದ್ಯೋಗಕ್ಕೆ ಸೇರಿದ್ದಳು. ಈ ವೇಳೆ ಆಕೆಗೆ ಅಮರ್ ಎಂಬ ಯುವಕ ಪರಿಚಯವಾಗಿದ್ದ. ನಂತರ ಅವರಿಬ್ಬರ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಇದೇ ಸಮಯದಲ್ಲಿ ಸುಜಾತಾ ಒಂದು ಗಂಡು ಮಗುವಿಗೂ ಜನ್ಮ ಕೊಟ್ಟಿದ್ದಳು. ಆದರೆ ಅನಾರೋಗ್ಯದಿಂದ ಕೆಲವು ತಿಂಗಳ ಹಿಂದೆ ಸುಜಾತ ಸಾವನ್ನಪ್ಪಿದ್ದಳು.
ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿ ನರಸಿಂಹಮೂರ್ತಿ ಕುಡಿತದ ದಾಸನಾಗಿದ್ದ. ಮತ್ತೊಂದೆಡೆ ಸುಜಾತಾಳ ಗಂಡು ಮಗು ತನ್ನದೆಂದು ಭಾವಿಸಿದ್ದ ಅಮರ್, ಆಗಾತ ಆಕೆಯ ಮನೆಗೆ ಬಂದು ಹೋಗುತ್ತಿದ್ದ. ಹೀಗೆ ಅಮರ್ಗೂ ಸುಜತಾಳ ತಾಯಿ ಜಯಮ್ಮ ಹಾಗೂ ಸಹೋದರ ನಂದೀಶ್ಗೂ ಉತ್ತಮ ಸ್ನೇಹ ಬೆಳೆದಿತ್ತು. ಪದೆ ಪದೆ ಅಮರ್ ಮನೆಗೆ ಭೇಟಿ ನೀಡುತ್ತಿದ್ದುದನ್ನು ನರಸಿಂಹಮೂರ್ತಿ ಗಮನಿಸಿದ್ದಲ್ಲದೆ, ಜಯಮ್ಮಳ ಜೊತೆ ಇದೇ ವಿಷಯಕ್ಕೆ ಜಗಳವನ್ನೂ ಆಡಿದ್ದ. ಈ ಜಗಳದ ಬಗ್ಗೆ ಅಮರ್‌ಗೆ ತಿಳಿಸಿದ ಜಯಮ್ಮ, ತನ್ನ ಮಗ ನಂದೀಶ್ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ.
ಹೆಂಡತಿಯ ನೆನಪಿನಲ್ಲೇ ಕುಡಿತು ಸತ್ತನೆಂಬಂತೆ ಬಿಂಬಿಸಲು ಪ್ರಯತ್ನ!
ಮೂರು ಜನ ರೂಪಿಸಿದ ಸಂಚಿನಂತೆ ನರಸಿಂಹಮೂರ್ತಿಯನ್ನು ಮನೆಗೆ ಕರೆದು ಚಿಕನ್ ಪಾರ್ಟಿ ಹೆಸರಿನಲ್ಲಿ ಮದ್ಯಪಾನ ಮಾಡಿಸಿದ್ದಾರೆ. ಬಳಿಕ ಅಮರ್ ಮತ್ತು ನಂದೀಶ್ ಆತನನ್ನು ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಗ್ರಾಮದ ಸಮೀಪ ರಸ್ತೆಯ ಬಳಿ ಸುಜಾತಾಳ ಫ್ಲೆಕ್ಸ್ ಇದ್ದ ಜಾಗದಲ್ಲಿಯೇ ಮೃತದೇಹವನ್ನು ಬಿಸಾಡಿದ್ದಾರೆ. ಹೆಂಡತಿಯ ನೆನಪಿನಲ್ಲಿ ಕುಡಿದು ಬಿದ್ದಿದ್ದಾನೆಂಬಂತೆ ಬಿಂಬಿಸಿದ್ದಾರೆ.
ಇದನ್ನೂ ಓದಿ ಮನೆಯ ಕಿಟಕಿ ಮುರಿದು ಒಳನುಗ್ಗಿ ಚಿನ್ನಾಭರಣ ಕದ್ದ ಖದೀಮರು; 110 ಗ್ರಾಂ ಬಂಗಾರ ಕಳವು
ತಪ್ಪೊಪ್ಪಿಕೊಂಡ ಆರೋಪಿಗಳು
ನರಸಿಂಹಮೂರ್ತಿಗೆ ಎಚ್ಚರವಾಗುತ್ತಿಲ್ಲವೆಂಬಂತೆ ನಾಟಕವಾಡಿ ತಾವೇ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ನಂತರ ವೈದ್ಯರ ಸಲಹೆ ಮೇರೆಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಹೋದಾಗ ಆತ ಸಾವನ್ನಪ್ಪಿರೋದಾಗಿ ವೈದ್ಯರು ದೃಢಪಡಿಸಿದ್ದಾರೆ. ಅಷ್ಟೇ ಅಕ್ಕದೆ ಮೃತದೇಹದ ಕುತ್ತಿಗೆ ಸುತ್ತ ಕಪ್ಪು ಕಲೆ ಮತ್ತು ಎಡಕಿವಿಯಲ್ಲಿ ರಕ್ತ ಬಂದಿರುವುದನ್ನೂ ಗಮನಿಸಿದ ವೈದ್ಯರು ಇದು ಸಹಜ ಸಾವಲ್ಲ, ಕೊಲೆಯೆಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಮೃತನ ಅಕ್ಕ ಗಾಯತ್ರಿ ಪೊಲೀಸರಿಗೆ ದೂರು ನೀಡಿದ್ದು, ವಶಕ್ಕೆ ಪಡೆದ ಆರೋಪಿಗಳ ವಿಚಾರಣೆ ವೇಳೆ ತಾವು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
