ಮಗುವಿನ ಹೊಟ್ಟೆಯಲ್ಲಿದ್ದ 25 ಸೆಂ.ಮೀ ಕೂದಲಿನ ಗುಡ್ಡೆ ಹೊರಗೆ ತೆಗೆದ ವೈದ್ಯರು! – Kannada News | Rare Pediatric Surgery: Medicover Bengaluru Removes 480g Hairball from 2 Year Old Pica Patient

ಬೆಂಗಳೂರು, ಮೇ.16: ಸಿಲಿಕಾನ್ ಸಿಟಿಯ ಮೆಡಿಕವರ್ ಆಸ್ಪತ್ರೆಯ ವೈದ್ಯರು ಅತ್ಯಂತ ಅಪರೂಪದ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ 2 ವರ್ಷದ ಪುಟ್ಟ ಮಗುವಿಗೆ ಮರುಜೀವ ನೀಡಿದ್ದಾರೆ. ಮಗುವಿನ ಹೊಟ್ಟೆಯಲ್ಲಿದ್ದ ಬರೋಬ್ಬರಿ 480 ಗ್ರಾಂ ತೂಕದ ಕೂದಲಿನ ಗುಡ್ಡೆ ಹಾಗೂ ರಬ್ಬರ್ ಬ್ಯಾಂಡ್‌ಗಳನ್ನು ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ವೈದ್ಯಕೀಯ ಜಗತ್ತಿನಲ್ಲಿ ಆಹಾರವಲ್ಲದ ವಸ್ತುಗಳನ್ನು (ಕೂದಲು, ರಬ್ಬರ್, ಪ್ಲಾಸ್ಟಿಕ್ ಇತ್ಯಾದಿ) ತಿನ್ನುವ ಇಂತಹ ವಿಚಿತ್ರ ಮಾನಸಿಕ ಮತ್ತು ದೈಹಿಕ ಅಭ್ಯಾಸವನ್ನು ‘ಪೈಕಾ’ (Pica) ಎನ್ನಲಾಗುತ್ತದೆ. ಈ 2 ವರ್ಷದ ಮಗುವಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು, ರಬ್ಬರ್ ಬ್ಯಾಂಡ್‌ಗಳು ಮತ್ತು ಬಲೂನ್ ತುಂಡುಗಳನ್ನು ತಿನ್ನುವ ವಿಚಿತ್ರ ಅಭ್ಯಾಸವಿತ್ತು. ಮಗು ನಿರಂತರವಾಗಿ ತಿಂದ ಕೂದಲು ಹೊಟ್ಟೆಯೊಳಗೆ ಸಂಗ್ರಹವಾಗಿ ದೊಡ್ಡ ಕೂದಲಿನ ಗುಡ್ಡೆಯಾಗಿ (Trichobezoar) ಮಾರ್ಪಟ್ಟಿತ್ತು. ಇದು ಹೊಟ್ಟೆಯಿಂದ ಆರಂಭವಾಗಿ ಸಣ್ಣ ಕರಳಿನವರೆಗೆ (Small Intestine) ಹರಡಿಕೊಂಡಿತ್ತು.

ಕಳೆದ ಕೆಲವು ದಿನಗಳಿಂದ ಮಗು ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಮತ್ತು ಆಹಾರ ಸೇವನೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿದ್ದರಿಂದ ಆತಂಕಗೊಂಡ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯಕೀಯ ತಪಾಸಣೆ ಮತ್ತು ಸ್ಕ್ಯಾನಿಂಗ್ ನಡೆಸಿದಾಗ ಕರಳು ಮತ್ತು ಹೊಟ್ಟೆಯ ಭಾಗದಲ್ಲಿ ದೊಡ್ಡ ತ್ಯಾಜ್ಯದ ರಾಶಿ ಇರುವುದು ಪತ್ತೆಯಾಗಿತ್ತು.

ಇದನ್ನೂ ಓದಿ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್: 9ನೇ ತರಗತಿಯಿಂದ 3 ಭಾಷೆಗಳ ಅಧ್ಯಯನ ಕಡ್ಡಾಯ; ಕನಿಷ್ಠ 2 ಭಾರತೀಯ ಭಾಷೆಗಳಿರಬೇಕು!

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮೆಡಿಕವರ್ ಆಸ್ಪತ್ರೆಯ ನಾಲ್ಕು ಪರಿಣಿತ ವೈದ್ಯರ ತಂಡವು ತಕ್ಷಣವೇ ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆ (Laparoscopic Surgery) ನಡೆಸಲು ನಿರ್ಧರಿಸಿತು. ಯಶಸ್ವಿ ಕಾರ್ಯಾಚರಣೆಯ ಮೂಲಕ ಮಗುವಿನ ಹೊಟ್ಟೆಯಿಂದ 25 ಸೆಂ.ಮೀ ಉದ್ದ ಮತ್ತು 480 ಗ್ರಾಂ ತೂಕದ ಬೃಹತ್ ಕೂದಲಿನ ರಾಶಿಯನ್ನು ಹೊರತೆಗೆಯಲಾಗಿದೆ. ಸದ್ಯ ಮಗು ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಇಷ್ಟು ಸಣ್ಣ ವಯಸ್ಸಿನ ಮಗುವಿನಲ್ಲಿ ಇಂತಹ ಪ್ರಕರಣ ಕಂಡುಬರುವುದು ಅತ್ಯಂತ ಅಪರೂಪ ಎಂದು ವೈದ್ಯರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *