ಮಗು ಮಾರಾಟ ಕೇಸ್ಗೆ ಬಿಗ್ ಟ್ವಿಸ್ಟ್Image Credit source: google Gemini
ಬೆಂಗಳೂರು, ಮೇ 05: ತನ್ನ ಜೊತೆ ಜಗಳವಾಡಿ ಮನೆ ಬಿಟ್ಟು ಹೋದ ಪತ್ನಿ ಎರಡೂವರೆ ವರ್ಷದ ಮಗುವನ್ನು 5 ಲಕ್ಷ ರೂಪಾಯಿಗೆ ಮಾರಾಟ (Child Sale) ಮಾಡಿದ್ದಾಳೆ ಎಂದು ದೂರು ನೀಡಿದ್ದ ರವಿಬಾಬು ಅಸಲಿ ಮುಖವಾಡ ಕಳಚಿದೆ. ಪೊಲೀಸರು ನಡೆಸಿದ ಚುರುಕಿನ ತನಿಖೆಯಲ್ಲಿ ಮಗು ಮಾರಾಟವಾಗಿಲ್ಲ ಮತ್ತು ತಾಯಿ ತನ್ನ ಮೂವರೂ ಮಕ್ಕಳೊಂದಿಗೆ ಸುರಕ್ಷಿತವಾಗಿದ್ದಾರೆ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ.
ತನಿಖೆಯಲ್ಲಿ ಬಯಲಾದ ಅಚ್ಚರಿಯ ಸತ್ಯ
ಪತಿ ರವಿಬಾಬು ನೀಡಿದ್ದ ದೂರಿನ ಮೇರೆಗೆ ಸತ್ಯದ ಬೆನ್ನತ್ತಿದ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ, ಪತ್ನಿ ಮಗುವನ್ನು ಮಾರಾಟ ಮಾಡಿಲ್ಲ, ಬದಲಾಗಿ ಪತಿಯ ದೈಹಿಕ ಮತ್ತು ಮಾನಸಿಕ ಕಿರುಕುಳ ತಾಳಲಾರದೆ ಮಕ್ಕಳೊಂದಿಗೆ ಮನೆ ಬಿಟ್ಟಿರುವುದು ತಿಳಿದುಬಂದಿದೆ. 16 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದರೂ ಪತಿ ರವಿಬಾಬುಗೆ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿತ್ತು ಹಾಗೂ ಎರೆಡೆರಡು ಮೊಬೈಲ್‌ಗಳನ್ನು ಬಳಸಿ ತನಗೆ ವಂಚಿಸುತ್ತಿದ್ದ ಎಂದು ಪತ್ನಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ ಮೆಜೆಸ್ಟಿಕ್ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ
ಸುಳ್ಳು ದೂರು
ಪತಿಯ ನಿರಂತರ ಕಿರುಕುಳ ಮತ್ತು ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ತನ್ನ ತವರು ಮನೆಯಲ್ಲೂ ಜಗಳವಾಗಿದ್ದರಿಂದ ಯಾರ ಸಹಾಯವೂ ಇಲ್ಲದೆ ಕಂಗಾಲಾಗಿದ್ದ ಮಹಿಳೆ, ಮಕ್ಕಳೊಂದಿಗೆ ಸುರಕ್ಷಿತವಾಗಿರಲು ನಿರ್ಧರಿಸಿ ಮನೆ ಬಿಟ್ಟು ಹೋಗಿದ್ದರು. ಆದರೆ, ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಮತ್ತು ಪತ್ನಿಯನ್ನು ಸಿಲುಕಿಸಲು ಪತಿ ರವಿಬಾಬು ಮಗು ಮಾರಾಟದ ಕಟ್ಟುಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.
ವಿವೇಕನಗರ ಪೊಲೀಸರು ತಾಯಿ ಮತ್ತು ಮೂವರು ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ರಕ್ಷಣೆ ನೀಡಿದ್ದಾರೆ. ಮಗುವನ್ನು ಮಾರಾಟ ಮಾಡಿದ್ದಾಳೆಂಬ ಗಂಭೀರ ಆರೋಪ ಹೊರಿಸಿದ್ದ ಪತಿಯನ್ನೇ ಈಗ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
