ಮಟ್ಕಾ ದಂಧೆ ಎಫೆಕ್ಟ್​​: ಕರ್ತವ್ಯಲೋಪ ಹಿನ್ನೆಲೆ ಗುತ್ತಲ ಠಾಣೆ ಪಿಎಸ್​ಐ ತಲೆದಂಡ – Kannada News | Guttal PSI Suspended for Dereliction of Duty After Deputy Speaker’s Matka Raid

ಗುತ್ತಲ ಠಾಣೆಯ PSI ಬಸನಗೌಡ ಬಿರಾದಾರ Image Credit source: Tv9 Kannada

ಹಾವೇರಿ, ಮಾರ್ಚ್​​ 05: ಗುತ್ತಲ ಪಟ್ಟಣದಲ್ಲಿ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿರುವ ಕಾರಣ ಕರ್ತವ್ಯಲೋಪ ಹಿನ್ನೆಲೆ ಗುತ್ತಲ ಠಾಣೆಯ PSI ಬಸನಗೌಡ ಬಿರಾದಾರ ಅವರನ್ನು ಅಮಾನತು ಮಾಡಿ ದಾವಣಗೆರೆ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇಗೌಡ ಆದೇಶ ಮಾಡಿದ್ದಾರೆ. 3 ದಿನಗಳ ಹಿಂದೆ ಗುತ್ತಲ ಪಟ್ಟಣಕ್ಕೆ ಭೇಟಿ ನೀಡಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮಟ್ಕಾ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ್ದರು. ಸ್ವತಃ ತಾವೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಹೀಗಾಗಿ ಮಟ್ಕಾ ದಂಧೆಕೋರರನ್ನು ಹಿಡಿಯಲು ಶಾಸಕರೇ ಬರಬೇಕಾಯಿತು ಎಂದು ಪೊಲೀಸ್​ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಪಿಎಸ್​ಐ ತಲೆದಂಡ ಮಾಡಿ ಐಜಿಪಿ ಆದೇಶಿಸಿದ್ದಾರೆ.

ಡೆಪ್ಯುಟಿ ಸ್ಪೀಕರ್​​ಗೆ ದೂರು ನೀಡಿದ್ದ ಮಹಿಳೆಯರು

ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಹಾವೇರಿ ತಾಲೂಕಿನ ಗುತ್ತಲ ಪಟ್ಟಣಕ್ಕೆ ರುದ್ರಪ್ಪ ಲಮಾಣಿ ಭೇಟಿ ನೀಡಿದ್ದರು, ಈ ವೇಳೆ ಸ್ಥಳೀಯ ಮಹಿಳೆಯರು ಡೆಪ್ಯುಟಿ ಸ್ಪೀಕರ್​​ಗೆ ಪ್ರಾಥಮಿಕ ಮಕ್ಕಳ ಶಾಲೆ ಸಮೀದ ಕೊಠಡಿಯೊಂದರಲ್ಲಿ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ದೂರು ನೀಡಿದ್ದರು. ಅವ್ಯಾಹತವಾಗಿ ದಂಧೆ ನಡೆಯುತ್ತಿದ್ದು, ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲದ ಸ್ಥಿತಿ ಉದ್ಭವಿಸಿರೋದಾಗಿ ಅಲವತ್ತುಕೊಂಡಿದ್ದರು. ಕೂಡಲೇ ಸ್ಥಳಕ್ಕೆ ರುದ್ರಪ್ಪ ಲಮಾಣಿ ಭೇಟಿ ನೀಡಿದಾಗ ವ್ಯಕ್ತಿಯೋರ್ವ ಮಟ್ಕಾ ಬರೆಯುತ್ತಿರುವುದು ಕಂಡುಬಂದಿತ್ತು.

ಇದನ್ನೂ ಓದಿ: ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿ ಬುಕ್ಕಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ‌ ಶಾಸಕ

ಮಹಿಳೆಯರು ದೂರಿರುವಂತೆ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿರುವುದನ್ನು ಕಂಡು ಗರಂ ಆದ ರುದ್ರಪ್ಪ ಲಮಾಣಿ, ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಪಿಎಸ್​ಐಗೆ ಆರೋಪಿಯನ್ನು ಒಪ್ಪಿಸಿದ್ದ ಡೆಪ್ಯುಟಿ ಸ್ಪೀಕರ್​​, ಅಧಿಕಾರಿಗಳನ್ನು ತರಾಟೆಗೆ ಪಡೆದ ಪ್ರಸಂಗವೂ ನಡೆದಿತ್ತು. ಕೂಡಲೇ ಮಟ್ಕಾ ದಂಧೆಗೆ ಕಡಿವಾಣ ಹಾಕುವಂತೆ ತಹಶೀಲ್ದಾರ್​​ ಮತ್ತು ಪೊಲೀಸ್​​ ಸಿಬ್ಬಂದಿಗೆ ರುದ್ರಪ್ಪ ಲಮಾಣಿ ಸೂಚಿಸಿರೋದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿತ್ತು. ಪೊಲೀಸರು ಮಾಡಬೇಕಾದ ಕೆಲಸವನ್ನು ಜನಪ್ರತಿನಿಧಿಯೇ ಬಂದು ಮಾಡಬೇಕಾಯಿತು ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಹೀಗಾಗಿ ಎಚ್ಚೆತ್ತ ಪೊಲೀಸ್​​ ಇಲಾಖೆ ಘಟನೆಗೆ ಸಂಬಂಧಿಸಿದಂತೆ ಗುತ್ತಲ ಠಾಣೆಯ PSI ಬಸನಗೌಡ ಬಿರಾದಾರ ಅವರನ್ನು ಸಸ್ಪೆಂಡ್​​ ಮಾಡಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:13 pm, Thu, 5 March 26

Source link

Leave a Reply

Your email address will not be published. Required fields are marked *