ಬೆಂಗಳೂರು, ಆಗಸ್ಟ್ 03: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಸೈಬರ್ ವಂಚಕರು ವ್ಯಕ್ತಿಯೋರ್ವರಿಂದ ಹಂತ ಹಂತವಾಗಿ 3 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಘಟನೆ ಬೆಂಗಳೂರಿನ (Bengaluru) ಜೀವನ್ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಾರ್ಥಸಾರಥಿ ಎಂಬ ವ್ಯಕ್ತಿಗೆ ECI ಅಧಿಕಾರಿ ಎಂದು ಹೇಳಿಕೊಂಡು ವಾಟ್ಸಪ್ ಕರೆ ಮಾಡಿದ್ದ ಖದೀಮ, ಈಗಾಗಲೇ ನೀವು ಸಲ್ಲಿಸಿರೋ SIR ಅರ್ಜಿ ರಿಜೆಕ್ಟ್ ಆಗಿದೆ. ಹೀಗಾಗಿ ಹೊಸ ಅರ್ಜಿ ಹಾಕಬೇಕು ಎಂದು ಲಿಂಕ್ ಒಂದನ್ನ ಕಳುಹಿಸಿದ್ದ. ಆತನ ಮಾತು ನಂಬಿ ಇವರು ಕೂಡ ಆನ್ಲೈನ್ ಮೂಲಕ ಹೆಸರು, ವಿಳಾಸ ಸೇರಿ ಮಾಹಿತಿ ತುಂಬಿದ್ದರು ಎನ್ನಲಾಗಿದೆ.
ಅರ್ಜಿ ಸ್ವೀಕಾರ ಸಂಬಂಧ ಖದೀಮ 5 ರೂಪಾಯಿ ಕೇಳಿದ್ದ. ಕ್ರೆಡಿಟ್ ಕಾರ್ಡ್ ಮೂಲಕ ಪೇ ಮಾಡಿದಾಗ ಟ್ರಾನ್ಸ್ಯಾಕ್ಷನ್ ಫೇಲ್ ಆಗಿತ್ತು. ಹೀಗಾಗಿ ಆತ ಕ್ಯೂಆರ್ ಕೋಡ್ ಕಳುಹಿಸಿದ್ದ ಎನ್ನಲಾಗಿದೆ. ಅದಾದ ಬಳಿಕ ದೂರುದಾರರ ಅಕೌಂಟ್ನಿಂದ ಹಂತ ಹಂತವಾಗಿ 3 ಲಕ್ಷದ 49 ಸಾವಿರದ 999 ರೂ. ಕಟ್ ಆಗಿದೆ. ಮೋಸ ಹೋಗಿರೋದು ಗೊತ್ತಾಗುತ್ತಿದ್ದಂತೆ ಪಾರ್ಥಸಾರಥಿ ಅವರು ಜೀವನ್ ಭಿಮಾನಗರ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೈಬರ್ ಹೂಡಿಕೆ ವಂಚನೆ ಪ್ರಕರಣಗಳು! ಸಾರ್ವಜನಿಕರಿಗೆ ಪೊಲೀಸರ ಸೂಚನೆ
SIR ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಎಚ್ಚರಿಕೆ
ಸೈಬರಾಬಾದ್ ಪೊಲೀಸರು ಹಾಗೂ ಸೈಬರ್ ಭದ್ರತಾ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿ, BLO ಅಥವಾ ಮತದಾರರ ಪಟ್ಟಿ ಪರಿಶೀಲನಾ ತಂಡದವರಂತೆ ಕರೆ ಮಾಡಬಹುದು. ವೈಯಕ್ತಿಕ ಮಾಹಿತಿ, ದಾಖಲೆಗಳು ಅಥವಾ OTP ಕೇಳಬಹುದು. SIR ಪರಿಶೀಲನೆಗಾಗಿ ಹಣ ಪಾವತಿಸಲು ಹೇಳಬಹುದು. ವಾಟ್ಸಾಪ್ ಮೂಲಕ ಲಿಂಕ್ ಅಥವಾ ನಕಲಿ ಆ್ಯಪ್ ಕಳುಹಿಸಬಹುದು. ಆದರೆ ಗಮನದಲ್ಲಿರಲಿ, SIR ಪರಿಶೀಲನೆಗೆ ಚುನಾವಣಾ ಆಯೋಗ ಯಾವುದೇ ಹಣ ಕೇಳುವುದಿಲ್ಲ. ಚುನಾವಣಾ ಆಯೋಗ APK ಫೈಲ್ ಅಥವಾ ಆ್ಯಪ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವುದಿಲ್ಲ. ಮತದಾರರ ಪರಿಶೀಲನೆ ವಾಟ್ಸಾಪ್ ಮೂಲಕ ನಡೆಯುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸುರಕ್ಷಿತವಾಗಿರಲು ಏನು ಮಾಡಬೇಕು?
ಅಪರಿಚಿತರು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಪರಿಚಯವಿಲ್ಲದ ಆ್ಯಪ್ ಅಥವಾ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಹೋಗಬೇಡಿ. OTP, ಬ್ಯಾಂಕ್ ಮಾಹಿತಿ ಅಥವಾ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾವುದೇ ಅನುಮಾನಾಸ್ಪದ ಕರೆ ಬಂದರೆ ತಕ್ಷಣ 1930 ಸಹಾಯವಾಣಿ ಅಥವಾ cybercrime.gov.in ಮೂಲಕ ದೂರು ನೀಡಿ ಎಂದು ತಜ್ಞರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.