ಸಮಂತಾ ಋತ್ ಪ್ರಭು (Samantha Ruth Prabhu) ಒಳ್ಳೆಯ ನಟಿ ಆಗಿರುವ ಜೊತೆಗೆ ಒಳ್ಳೆಯ ಟಿವಿ ಹೋಸ್ಟ್ ಸಹ. ಅಸಲಿಗೆ ಸಮಂತಾ ತಮ್ಮ ವೃತ್ತಿ ಆರಂಭಿಸಿದ್ದೇ ಕಾರ್ಯಕ್ರಮ ನಿರೂಪಕಿ ಆಗಿ. ಬಳಿಕ ಮಾಡೆಲ್ ಆದರು. ಆ ಬಳಿಕ ಸಿನಿಮಾ ನಟಿ ಆದರು. ಸಿನಿಮಾ ನಟಿಯಾಗಿದ್ದ ಸಮಂತಾ ಕೆಲ ಟಿವಿ ಶೋಗಳ ಹೋಸ್ಟ್ ಸಹ ಆಗಿದ್ದರು. ಅವರ ಮಾಜಿ ಮಾವ ನಾಗಾರ್ಜುನ ಅವರ ಅನುಪಸ್ಥಿತಿಯಲ್ಲಿ ಸಮಂತಾ, ಬಿಗ್ಬಾಸ್ ತೆಲುಗು ಅನ್ನು ನಿರೂಪಣೆ ಸಹ ಮಾಡಿದ್ದರು. ಅದರ ಜೊತೆಗೆ ಒಂದು ಟಾಕ್ ಶೋ, ಒಂದು ಪಾಡ್ಕಾಸ್ಟ್ ಅನ್ನು ಸಹ ಸಮಂತಾ ಮಾಡಿದ್ದಾರೆ. ಇದೀಗ ಮತ್ತೊಂದು ಟಾಕ್ ಶೋ ಜೊತೆಗೆ ಸಮಂತಾ ಕಿರುಕತೆರೆಗೆ ಮರಳುತ್ತಿದ್ದಾರೆ.
‘ಆಹಾ’ ಒಟಿಟಿಯಲ್ಲಿ ‘ಸ್ಯಾಮ್ ಜಾಮ್’ ಹೆಸರಿನ ಟಾಕ್ ಶೋ ಅನ್ನು ಸಮಂತಾ ನೆಡೆಸಿಕೊಟ್ಟಿದ್ದರು. ಟಾಕ್ ಶೋಗೆ ಹಲವಾರು ನಟ, ನಟಿಯರನ್ನು ಆಹ್ವಾನಿಸಿ ಅವರ ಬಳಿ ಮಾತನಾಡಿದ್ದರು. ಇದೀಗ ಸಮಂತಾ ಅವರು ಮತ್ತೊಂದು ಟಾಕ್ ಶೋ ಜೊತೆ ಕಿರುತೆರೆಗೆ ಮರಳಲಿದ್ದಾರೆ. ಕಳೆದ ಬಾರಿ ತೆಲುಗಿನಲ್ಲಿ ಟಾಕ್ ಶೋ ಮಾಡಿದ್ದ ಸಮಂತಾ, ಈ ಬಾರಿ ತಮಿಳಿನಲ್ಲಿ ಟಾಕ್ ಶೋ ನಡೆಸಿಕೊಡಲಿದ್ದಾರೆ ಎಂಬ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ.
ಸಮಂತಾ ಅವರು ಸೋನಿ ಲಿವ್ ಒಟಿಟಿಗಾಗಿ ಟಾಕ್ ಶೋ ನಡೆಸಲಿದ್ದು, ಈ ಟಾಕ್ ಶೋ ಅವರ ‘ಸ್ಯಾಮ್ ಜಾಮ್’ ರೀತಿ ತಮಾಷೆಯಾಗಿ ಇರುವ ಜೊತೆಗೆ ತುಸು ಭಾವುಕತೆಯಿಂದಲೂ ಕೂಡಿರಲಿದೆ. ಸಮಂತಾ, ಅತಿಥಿಗಳಾಗಿ ಬರುವವರ ಖಾಸಗಿ ಅನುಭವಗಳು, ಭಾವನೆಗಳ ಬಗ್ಗೆಯೂ ಮಾತನಾಡಲಿದ್ದಾರಂತೆ. ಇದೊಂದು ಟಾಕ್ ಶೋ ಮಾತ್ರವೇ ಅಲ್ಲದೆ, ಪಾಡ್ಕಾಸ್ಟ್ ಸಹ ಆಗಿರಲಿದೆ. ಟಾಕ್ ಶೋನಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ವಿಷಯಗಳನ್ನು ಸಮಂತಾ ಮಾತನಾಡಲಿದ್ದಾರೆ.
ಇದನ್ನೂ ಓದಿ:ಸಮಂತಾ ಋತ್ ಪ್ರಭು ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?
ಸಮಂತಾ ಈಗ ಗರ್ಭಿಣಿ, ಈಗಲೇ ಅವರು ಟಾಕ್ ಶೋ ಚಿತ್ರೀಕರಣ ಪ್ರಾರಂಭಿಸಲಿದ್ದಾರೆಯೇ ಎಂಬ ಬಗ್ಗೆ ಖಾತ್ರಿ ಇಲ್ಲ. ಈಗಲೇ ಟಾಕ್ ಶೋ ಶುರು ಮಾಡಲಿದ್ದಾರೆಯೇ ಅಥವಾ ಇನ್ನೂ ಸುಮಾರು ಒಂದು ವರ್ಷ ಕಾದು ಆ ಬಳಿಕ ಚಿತ್ರೀಕರಣ ಶುರು ಮಾಡಲಿದ್ದಾರೆಯೇ ಕಾದು ನೋಡಬೇಕಿದೆ. ಈಗಾಗಲೇ ಒಂದು ಟಾಕ್ ಶೋ ಮತ್ತು ಒಂದು ಪಾಡ್ಕಾಸ್ಟ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸಮಂತಾಗೆ ಮತ್ತೊಂದು ಟಾಕ್ ಶೋ ನಡೆಸುವುದು ದೊಡ್ಡ ಕಷ್ಟವೇನೂ ಆಗದು. ಅಲ್ಲದೆ, ತಮಿಳು ಸಮಂತಾರ ಮಾತೃ ಭಾಷೆ ಆಗಿರುವ ಕಾರಣ ಅದು ಅವರಿಗೆ ಇನ್ನೂ ಸುಲಭ ಆಗಲಿದೆ.
ಸಮಂತಾ ನಟಿಸಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾಕ್ಕೆ ಸಮಂತಾರ ಪತಿ ರಾಜ್ ನಿಧಿಮೋರು ಬಂಡವಾಳ ಹೂಡಿದ್ದರು. ಸಮಂತಾ ಸಹ ನಿರ್ಮಾಪಕಿ ಆಗಿದ್ದರು. ಸಿನಿಮಾವನ್ನು ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
