ಮದುವೆಯಂತಹ ಲೈಫ್ ಟೈಮ್ ಬದ್ಧತೆಗೆ ಒಳಗಾಗುವ ಮುನ್ನ ಹುಡುಗ-ಹುಡುಗಿ ಒಟ್ಟಿಗೆ ವಾಸಿಸಬೇಕು (ಲಿವ್-ಇನ್ ರಿಲೇಶನ್‌ಶಿಪ್) ಎಂದು ಬಾಲಿವುಡ್‌ನ ಹಿರಿಯ ನಟಿ ಜೀನತ್ ಅಮಾನ್ (Zeenat Aman) ಅವರು ಹೇಳಿದ್ದಾರೆ. ಜೀನತ್ ಅಮಾನ್ ಅವರಿಗೆ 74 ವರ್ಷ ವಯಸ್ಸು. ಸಾಯಿರಾ ಬಾನು ಮತ್ತು ಮುಮ್ತಾಜ್ ಅವರಂತಹ ಸಮಕಾಲೀನ ನಟಿಯರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದರೂ, ಜೀನತ್ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗೆ ಶುಭ್ರಾ ಅಯ್ಯಪ್ಪ ಅವರೊಂದಿಗಿನ ಸಂದರ್ಶನದಲ್ಲಿ, ಇಂದಿನ ಜಗತ್ತಿಗೆ ಲಿವ್-ಇನ್ ಸಂಬಂಧಗಳು (Live In Relationships) ಏಕೆ ಹೆಚ್ಚು ಪ್ರಸ್ತುತ ಎಂದು ಅವರು ವಿವರಿಸಿದ್ದಾರೆ.
‘ಇಂದಿನ ಕಾಲದಲ್ಲಿ ಯಾವುದೂ ಶಾಶ್ವತವಲ್ಲ. ಕಾನೂನುಬದ್ಧವಾಗಿ ಒಂದಾಗುವ ಮುನ್ನ ಪರಸ್ಪರ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೀವು ಹೊಂದಿಕೊಳ್ಳುತ್ತೀರಾ ಎಂಬುದನ್ನು ತಿಳಿದುಕೊಳ್ಳಬೇಕು. ಭವಿಷ್ಯದಲ್ಲಿ ಮಕ್ಕಳನ್ನು ಹೇಗೆ ಬೆಳೆಸಬೇಕು? ಹಣಕಾಸಿನ ವಿಷಯದಲ್ಲಿ ನಿಮ್ಮ ಅಭಿಪ್ರಾಯಗಳೇನು ಎಂಬುದನ್ನು ಮೊದಲೇ ಚರ್ಚಿಸಬೇಕು. ಹೊಂದಾಣಿಕೆಯೇ ಇಲ್ಲದಿದ್ದಾಗ 15 ವರ್ಷಗಳ ಕಾಲ ದುಃಖದ ಜೀವನ ನಡೆಸುವ ಬದಲು, 5 ವರ್ಷಗಳ ಕಾಲ ಸಂತೋಷದಿಂದ ಇರುವುದು ಉತ್ತಮ ಅಲ್ಲವೇ’ ಎಂದು ಜೀನತ್ ಪ್ರಶ್ನಿಸಿದ್ದಾರೆ.
‘ರೊಮ್ಯಾನ್ಸ್ ಯಾವಾಗಲೂ ಇರುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ಯಾವುದೂ ಶಾಶ್ವತವಲ್ಲ. ಸಂಬಂಧಗಳು ಯಾವಾಗಲೂ ಹೊಂದಾಣಿಕೆ ಮತ್ತು ರಾಜಿಗಳ ಮೇಲೆ ಮುನ್ನಡೆಯುತ್ತವೆ. ಹನಿಮೂನ್ ಹಂತವೇ ಸದಾ ಇರುವುದಿಲ್ಲ’ ಎಂದು ಜೀನತ್ ಅಮಾನ್ ಅವರು ಹೇಳಿದ್ದಾರೆ. ಜೀನತ್ ಅಮಾನ್ ಅವರು ತಮ್ಮ ಇಬ್ಬರು ಪುತ್ರರಿಗೂ ಮದುವೆಗೂ ಮುನ್ನ ತಮ್ಮ ಸಂಗಾತಿಗಳ ಜೊತೆ ಲಿವ್-ಇನ್‌ನಲ್ಲಿರಲು ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗ್ತೀನೆಂದು ನಂಬಿಸಿ 4 ವರ್ಷ ಲಿವ್-ಇನ್ ಸಂಬಂಧದಲ್ಲಿದ್ದು ಕೈಕೊಟ್ಟ ಪೊಲೀಸ್, ಮಹಿಳೆ ಆತ್ಮಹತ್ಯೆ
ಜೀನತ್ ಅವರ ವೈಯಕ್ತಿಕ ಜೀವನವು ಸಾಕಷ್ಟು ಏರುಪೇರುಗಳಿಂದ ಕೂಡಿದ್ದಾಗಿತ್ತು. ಸಂಜಯ್ ಖಾನ್ ಅವರೊಂದಿಗಿನ ಅವರ ಅಲ್ಪಾವಧಿಯ ವಿವಾಹವು ದೈಹಿಕ ದೌರ್ಜನ್ಯದ ಆರೋಪದೊಂದಿಗೆ ಕೊನೆಗೊಂಡಿತು. ನಂತರ 1985ರಲ್ಲಿ ನಟ ಮಜರ್ ಖಾನ್ ಅವರನ್ನು ವಿವಾಹವಾದರು. ಆದರೆ ತಾವು ಗರ್ಭಿಣಿಯಾಗಿದ್ದಾಗ ಮಜರ್ ತಮಗೆ ದ್ರೋಹ ಮಾಡಿದ್ದರು ಎಂದು ಜೀನತ್ ಆರೋಪಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
