ಮದುವೆಗೆ ಬಂದು ಉಡುಗೊರೆ ಕೊಡದೆ ಊಟ ಮಾಡುವಂತಿಲ್ಲ, ಹಣ ಮರೆತು ಬಂದಿದ್ರೆ ಮಂಟಪದ ಪಕ್ಕದಲ್ಲೇ ಇರುತ್ತೆ ಎಟಿಎಂ,ಇದು ಕೊರಿಯನ್ ಕಲ್ಯಾಣ – Kannada News | Korean Weddings: ATM at Venue, Pay for Food, Get Coupon – A Unique Custom

ಸಿಯೋಲ್, ಜುಲೈ 15: ನೀವು ದಕ್ಷಿಣ ಕೊರಿಯಾದಲ್ಲಿ ಯಾವುದಾದರೂ ಮದುವೆ(Marriage)ಗೆ ಹೋಗಬೇಕಾ? ಹಾಗಿದ್ದರೆ ನಿಮ್ಮ ಜೇಬಿನಲ್ಲಿ ಗರಿಗರಿ ನೋಟುಗಳಿರಲೇಬೇಕು. ಇಲ್ಲದಿದ್ದರೆ ನಿಮಗೆ ಅಲ್ಲಿ ಊಟ ಹಾಗಿರಲಿ, ಮಂಟಪದೊಳಗೆ ಗೌರವವೂ ಸಿಗಲ್ಲ. ಹೌದು, ದಕ್ಷಿಣ ಕೊರಿಯಾದಲ್ಲಿ ಮದುವೆ ಎನ್ನುವುದು ಒಂದು ವ್ಯವಹಾರದಂತಾಗಿ ಮಾರ್ಪಟ್ಟಿದ್ದು, ಇತ್ತೀಚಿನ ವೈರಲ್ ವಿಡಿಯೋವೊಂದು ಅಲ್ಲಿನ ಅತಿಥಿ ಸತ್ಕಾರದ ಕಟು ಸತ್ಯವನ್ನು ಬಯಲಿಗೆಳೆದಿದೆ. ಅಲ್ಲಿ ವಧು-ವರರಿಗೆ ನೀವು ಕೊಡುವ ಹಣ (ಮೊಯ್) ಅವರು ನಿಮ್ಮೊಂದಿಗೆ ಹೊಂದಿರುವ ಸಂಬಂಧದ ಮೇಲೆ ನಿರ್ಧಾರವಾಗುತ್ತದೆ.

ಸಂಬಂಧಕ್ಕೆ ತಕ್ಕಂತೆ ರೇಟ್ ಫಿಕ್ಸ್

ಕೇವಲ ಪರಿಚಯಸ್ಥರು,ಸಹೋದ್ಯೋಗಿ: ನೀವು ಕೇವಲ ನೆಪಮಾತ್ರಕ್ಕೆ ಪರಿಚಯವಿದ್ದು, ಮದುವೆಗೆ ಹೋಗದೆ ಮನೆಯಲ್ಲೇ ಇರುವುದಾದರೆ ಆನ್‌ಲೈನ್ ಮೂಲಕ ಕನಿಷ್ಠ 50,000 KRW (ಕೊರಿಯನ್ ವೊನ್ – ಅಂದರೆ ನಮ್ಮ ಭಾರತೀಯ ಕರೆನ್ಸಿಯಲ್ಲಿ ಸುಮಾರು 3,000 ರೂ.) ಹಣವನ್ನು ಕಳುಹಿಸಬೇಕು.

ಮದುವೆಗೆ ಹಾಜರಾಗಿ ಊಟ ಮಾಡುವುದಾದರೆ: ನೀವು ಖುದ್ದಾಗಿ ಮದುವೆಗೆ ಹೋಗಿ ಅಲ್ಲಿನ ಐಷಾರಾಮಿ ಭೋಜನ ಸವಿಯಬೇಕೆಂದರೆ ಕನಿಷ್ಠ 100,000 KRW (ಸುಮಾರು 6,000 ರೂ.) ಕೊಡಲೇಬೇಕು. ಏಕೆಂದರೆ ಅಲ್ಲಿ ಪ್ರತಿ ಪ್ಲೇಟ್ ಊಟದ ವೆಚ್ಚ ಅಷ್ಟೊಂದು ದುಬಾರಿಯಾಗಿರುತ್ತದೆ.

ಆಪ್ತ ಸ್ನೇಹಿತರು, ಸಂಬಂಧಿಕರು: ಇನ್ನು ತೀರಾ ಹತ್ತಿರದವರಾಗಿದ್ದರೆ 200,000 KRW ನಿಂದ 500,000 KRW (ಸುಮಾರು 12,000 ರೂ. ದಿಂದ 30,000ರೂ.) ವರೆಗೆ ಹಣವನ್ನು ನೀಡಬೇಕಾಗುತ್ತದೆ.

ಮತ್ತಷ್ಟು ಓದಿ: Video: ಮದುವೆ ಮಂಟಪದಿಂದ ಓಡಿಹೋದ ವರ, ವಾಟ್ಸಾಪ್‌ಗೆ ಬಂದ ಆ ಒಂದು ಫೋಟೋ ತಂದ ಭಾರಿ ಫಜೀತಿ

ಮಂಟಪದ ಒಳಗೇ ಇರುತ್ತೆ ATM ಯಂತ್ರಗಳು

ಅಯ್ಯೋ.. ಗಡಿಬಿಡಿಯಲ್ಲಿ ಗಿಫ್ಟ್ ತರೋದು ಮರೆತುಹೋಯ್ತು, ಕೈಯಲ್ಲಿ ಕ್ಯಾಶ್ ಇಲ್ಲ ಎಂಬ ನೆಪ ಕೊರಿಯಾದಲ್ಲಿ ನಡೆಯಲ್ಲ. ಅತಿಥಿಗಳು ಇಂತಹ ಸಬೂಬು ಹೇಳಬಾರದು ಎಂಬ ಕಾರಣಕ್ಕೆ ಅಲ್ಲಿನ ಪ್ರತಿಯೊಂದು ಮದುವೆ ಹಾಲ್‌ನ ಸ್ವಾಗತ ಕೌಂಟರ್ ಪಕ್ಕದಲ್ಲೇ ಎಟಿಎಂ (ATM) ಯಂತ್ರಗಳನ್ನು ಅಳವಡಿಸಲಾಗಿರುತ್ತದೆ. ಹಣ ತರದವರು ತಕ್ಷಣ ಅಲ್ಲಿ ಕಾರ್ಡ್ ಹಾಕಿ ಹಣ ಡ್ರಾ ಮಾಡಿಕೊಳ್ಳಬಹುದು. ಅಲ್ಲೇ ಸಿಗುವ ಬಿಳಿ ಲಕೋಟೆಯಲ್ಲಿ ಹಣವಿಟ್ಟು, ತಮ್ಮ ಹೆಸರು ಬರೆದು ಕೌಂಟರ್‌ಗೆ ಕೊಡಬೇಕು.

ಲಕೋಟೆ ಬಿಚ್ಚಿ ಹಣ ಎಣಿಸಿದ ಮೇಲೆಯೇ ಊಟದ ಕೂಪನ್

ಮದುವೆ ಹಾಲ್ ಪ್ರವೇಶಿಸುತ್ತಿದ್ದಂತೆ ವರ ಮತ್ತು ವಧುವಿನ ಕಡೆಯವರು ಪ್ರತ್ಯೇಕ ಕೌಂಟರ್ ಹಾಕಿ ಕುಳಿತಿರುತ್ತಾರೆ. ಅತಿಥಿಗಳು ತಂದ ಹಣದ ಲಕೋಟೆಯನ್ನು ಅಲ್ಲಿನ ಸಿಬ್ಬಂದಿಗೆ ಕೊಡುತ್ತಿದ್ದಂತೆ, ಅವರು ತಕ್ಷಣವೇ ಅತಿಥಿಗಳ ಕಣ್ಣೆದುರೇ ಲಕೋಟೆ ಬಿಚ್ಚಿ ಹಣವನ್ನು ಎಣಿಸುತ್ತಾರೆ. ಆ ಮೊತ್ತವನ್ನು ಅಧಿಕೃತ ಪುಸ್ತಕದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.

ನೀವು ನೀಡಿದ ಹಣ ಅವರು ನಿಗದಿಪಡಿಸಿದ ಕನಿಷ್ಠ ಮೊತ್ತಕ್ಕೆ (ಕನಿಷ್ಠ 6,000 ರೂ.) ಸಮನಾಗಿದ್ದರೆ ಮಾತ್ರ ನಿಮಗೊಂದು ‘ಊಟದ ಕೂಪನ್’ ನೀಡಲಾಗುತ್ತದೆ. ಒಂದು ವೇಳೆ ಅದಕ್ಕಿಂತ ಕಡಿಮೆ ಹಣ ಕೊಟ್ಟರೆ ನಿಮಗೆ ಕೂಪನ್ ಸಿಗಲ್ಲ, ಅಂದರೆ, ನೀವು ವಧು-ವರರನ್ನು ಆಶೀರ್ವದಿಸಿ ಊಟ ಮಾಡದೆಯೇ ಹಸಿದ ಹೊಟ್ಟೆಯಲ್ಲಿ ಮನೆಗೆ ಮರಳಬೇಕಾಗುತ್ತದೆ. ಪ್ರೀತಿ-ವಿಶ್ವಾಸಕ್ಕಿಂತ ಹಣವೇ ಪ್ರಧಾನವಾಗಿರುವ ಕೊರಿಯನ್ನರ ಈ ವಿಚಿತ್ರ ಮದುವೆ ಪದ್ಧತಿ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *