ಪುಣೆ, ಜೂನ್ 23: ಆತನ ಹೆಸರು ಕೇತನ್ ಅಗರ್ವಾಲ್. ಪುಣೆಯ ಉದ್ಯಮಿಯ ಮಗಳಾದ ಸಿಯಾ ಗೋಯಲ್ ಜೊತೆ ಆತನ ಮದುವೆ ನಿಶ್ಚಯವಾಗಿತ್ತು. ಎರಡೂ ಕುಟುಂಬದವರು ಉದ್ಯಮಿಗಳಾಗಿದ್ದರಿಂದ ಅದ್ದೂರಿಯಾಗಿಯೇ ಮದುವೆ (Wedding) ಮಾಡಲು ನಿಶ್ಚಯಿಸಿದ್ದರು. ಅದಕ್ಕಾಗಿ 17 ಕೋಟಿ ರೂ. ಹಣ ನೀಡಿ ಜೈಪುರದಲ್ಲಿ ಅರಮನೆಯನ್ನು ಕೂಡ ಬುಕ್ ಮಾಡಿದ್ದರು. ಇದೇ ವರ್ಷ ನವೆಂಬರ್‌ನಲ್ಲಿ ಅವರಿಬ್ಬರ ಮದುವೆ ನಡೆಯಬೇಕಿತ್ತು. ಆದರೆ, ಅಷ್ಟರೊಳಗೆ ವರ ಕೇತನ್ ಅಗರ್ವಾಲ್ ನಿಗೂಢವಾಗಿ ಸಾವನ್ನಪ್ಪಿದ್ದರು. ತಾನು ಮದುವೆಯಾಗುವ ಹುಡುಗಿ ಸಿಯಾ ಜೊತೆ ಆಕೆಯ ಬರ್ತಡೇ ಸೆಲಬ್ರೇಷನ್ಗೆ ಟ್ರೆಕಿಂಗ್ ಹೋಗಿದ್ದ ಕೇತನ್ ಅಲ್ಲಿ ಆಕೆಯ ಜೊತೆ ಫೋಟೋಶೂಟ್ ಮಾಡಿಕೊಂಡಿದ್ದರು. ಈ ವೇಳೆ ಫೋಟೋಗೆ ಪೋಸ್ ನೀಡುವಾಗ ಕಾಲುಜಾರಿ ಪ್ರಪಾತದಿಂದ ಬಿದ್ದಿದ್ದರು. ಈ ಕತೆ ಹೇಳಿದ್ದು ಸಿಯಾ ಗೋಯಲ್.
ಮದುವೆ ನಿಶ್ಚಯವಾಗಿದ್ದ ಮಹಾರಾಷ್ಟ್ರದ ಪ್ರಮುಖ ಉದ್ಯಮಿಯೊಬ್ಬರ ಮಗ ಕೇತನ್ ಅಗರ್ವಾಲ್ ಪುಣೆಯ ಪ್ರಸಿದ್ಧ ಲೋಹಗಢ ಕೋಟೆಯಿಂದ ಬಿದ್ದು ಸಾವನ್ನಪ್ಪಿದ ಪ್ರಕರಣ ತೀವ್ರ ದುಃಖವನ್ನು ಉಂಟುಮಾಡಿತ್ತು. ಆದರೆ, ಆ ಆಕಸ್ಮಿಕ ಸಾವು ಇದೀಗ ಭಯ ಹುಟ್ಟಿಸುವ ಕೊಲೆ ಕೇಸ್ ಆಗಿ ಬದಲಾಗಿದೆ. ಫೋಟೋ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ ಎಂದೇ ಮೊದಲು ಪೊಲೀಸರು ಕೇಸ್ ದಾಖಲಿಸಿದ್ದರು. ಆದರೆ, ಈ ಸಾವಿನ ಹಿಂದೆ ಆತ ಮದುವೆಯಾಗಬೇಕಿದ್ದ ಯುವತಿ ಸಿಯಾ ಮತ್ತು ಆಕೆಯ ಪ್ರಿಯಕರನ ಕೈವಾಡ ಇರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಏನಿದು ಘಟನೆ?:
ಮಹಾರಾಷ್ಟ್ರದ ಪಿಂಪ್ರಿ-ಚಿಂಚಾಂವಡ್‌ನ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಪುತ್ರ 26 ವರ್ಷದ ಕೇತನ್ ಅಗರ್ವಾಲ್ ಜೂನ್ 18ರಂದು ಲೋಹಗಢ ಕೋಟೆಯಲ್ಲಿ ಸುಮಾರು 400 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದರು. ಅಂದು ಕೇತನ್ ತಾವು ಮದುವೆಯಾಗಬೇಕಿದ್ದ ಹುಡುಗಿ ಸಿಯಾ ಗೋಯಲ್ ಹುಟ್ಟುಹಬ್ಬವನ್ನು ಆಚರಿಸಲು ಅಲ್ಲಿಗೆ ಟ್ರೆಕ್ಕಿಂಗ್ ಹೋಗಿದ್ದರು. ಫೋಟೋಗೆ ಪೋಸ್ ನೀಡುವಾಗ ಕೇತನ್ ಕಾಲು ಜಾರಿ ಬಿದ್ದರು ಎಂದು ಸಿಯಾ ಪೊಲೀಸರಿಗೆ ಕತೆ ಕಟ್ಟಿದ್ದಳು. ಸುಮಾರು ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಶವವನ್ನು ಹೊರತೆಗೆಯಲಾಗಿತ್ತು.
ಇದನ್ನೂ ಓದಿ: ಜಿಮ್ ಟ್ರೈನರ್ ವಿಜಯ್ ಕೊಲೆಗೆ ಬಿಗ್ ಟ್ವಿಸ್ಟ್: ಪ್ರಭಾವಿ ಉದ್ಯಮಿಯ ಕೈವಾಡ, ಯಾರದು?
ಬಯಲಾಯ್ತು ಕೊಲೆಯ ರಹಸ್ಯ:
ಮೊದಲಿಗೆ ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಲೋನಾವಾಲಾ ಗ್ರಾಮಾಂತರ ಪೊಲೀಸರಿಗೆ ಸಿಯಾ ನೀಡಿದ ಹೇಳಿಕೆಗಳ ಮೇಲೆ ಅನುಮಾನ ಮೂಡಿತು. ಇತ್ತೀಚೆಗೆ ಪ್ರೇಯಸಿ, ಹೆಂಡತಿಯಿಂದ ಕೊಲೆ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗಿರುವುದರಿಂದ ಕೇತನ್‌ನ ಅಪ್ಪನಿಗೆ ಸಿಯಾ ಮೇಲೆ ಸಣ್ಣದೊಂದು ಅನುಮಾನ ಮೂಡಿತ್ತು. ಕೇತನ್ ಪರಿಣಿತ ಟ್ರೆಕ್ಕರ್ ಆಗಿದ್ದರಿಂದ ಆಕಸ್ಮಿಕವಾಗಿ ಬೀಳಲು ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು.
ಹೀಗಾಗಿ, ಪೊಲೀಸರು ಸಿಯಾಳ ಮೊಬೈಲ್ ಡೇಟಾ, ಕರೆ ದಾಖಲೆಗಳು ಮತ್ತು ಘಟನಾ ಸ್ಥಳದಲ್ಲಿದ್ದ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಂದಿದೆ. ಸಿಯಾ ತನ್ನ ಪ್ರಿಯಕರ ಚೇತನ್ ಚೌಧರಿಯ ಜೊತೆ ಸೇರಿ ಈ ಹತ್ಯೆಗೆ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಫೋಟೋಶೂಟ್ ನೆಪದಲ್ಲಿ ಕೇತನ್‌ನನ್ನು ಕೋಟೆಯ ತುದಿಗೆ ಕರೆದುಕೊಂಡು ಹೋಗಿದ್ದ ಸಿಯಾ ಆತನನ್ನು ಅಲ್ಲಿಂದ ತಳ್ಳಿದ್ದಳು. ಅದಕ್ಕೆ ಚೇತನ್ ಸಾಥ್ ನೀಡಿದ್ದ.
ಇದನ್ನೂ ಓದಿ: ಮಾಜಿ ಲವರ್ ಮನೆಗೆ ಹೋಗಿ ಆಕೆಯ ಪತಿಯ ಕೈಯಲ್ಲೇ ಕೊಲೆಯಾದ ಯುವಕ!
ಮದುವೆಗೆ ಬುಕ್ ಆಗಿತ್ತು ಜೈಪುರದ ಅರಮನೆ!:
ಕೇತನ್ ಮತ್ತು ಸಿಯಾ ಅವರ ವಿವಾಹವು ಮುಂಬರುವ ನವೆಂಬರ್‌ನಲ್ಲಿ ರಾಜಸ್ಥಾನದ ಉದಯಪುರ ಅಥವಾ ಜೈಪುರದಲ್ಲಿ ನಡೆಯಬೇಕಿತ್ತು. ಮದುವೆಗಾಗಿ ಎರಡೂ ಕುಟುಂಬಗಳು ಸೇರಿ ಜೈಪುರದಲ್ಲಿ ಬರೋಬ್ಬರಿ 17 ಕೋಟಿ ರೂ. ವೆಚ್ಚದಲ್ಲಿ ಅರಮನೆಯೊಂದನ್ನು ಬುಕ್ ಮಾಡಿದ್ದವು. ಅಷ್ಟೇ ಅಲ್ಲದೆ, ಅತಿಥಿಗಳನ್ನು ಕರೆದೊಯ್ಯಲು ಎರಡು ಖಾಸಗಿ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದಾಗ ಇಡೀ ಕುಟುಂಬಕ್ಕೆ ಈ ಘಟನೆ ಬರಸಿಡಿಲಿನಂತೆ ಎರಗಿದೆ.
ಕೊಲೆಗೆ ಕಾರಣವೇನು?:
ಪೊಲೀಸ್ ತನಿಖೆಯ ಪ್ರಕಾರ, 20 ವರ್ಷದ ಸಿಯಾ ಗೋಯಲ್‌ಗೆ ತನ್ನ ಕುಟುಂಬದವರು ನಿಶ್ಚಯಿಸಿದ್ದ ಕೇತನ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆಕೆ ಚೇತನ್ ಚೌಧರಿಯನ್ನು ಪ್ರೀತಿಸುತ್ತಿದ್ದಳು. ತಮ್ಮ ಪ್ರೀತಿಯ ನಡುವೆ ಮುಳ್ಳಾಗಿದ್ದ ಕೇತನ್‌ನನ್ನು ಶಾಶ್ವತವಾಗಿ ಮುಗಿಸಲು ಇಬ್ಬರೂ ಪ್ಲಾನ್ ಮಾಡಿದ್ದರು. ಇದಕ್ಕೂ ಮುನ್ನ ವಿದೇಶಕ್ಕೆ ಹೋಗಬೇಕಿದ್ದ ಟ್ರಿಪ್ ಅನ್ನು ಕೇತನ್‌ನ ಪಾಸ್‌ಪೋರ್ಟ್ ಕದ್ದು ಸಿಯಾ ಹಾಳು ಮಾಡಿದ್ದಳು ಎನ್ನಲಾಗಿದೆ. ನಂತರ ತನ್ನ ಹುಟ್ಟುಹಬ್ಬದ ನೆಪದಲ್ಲಿ ಕೇತನ್‌ನನ್ನು ಲೋಹಗಢ ಕೋಟೆಗೆ ಕರೆದೊಯ್ದಿದ್ದಳು. ಮೊದಲೇ ಅಲ್ಲಿಗೆ ಬಂದು ಹೊಂಚು ಹಾಕಿ ಕುಳಿತಿದ್ದ ಪ್ರಿಯಕರ ಚೇತನ್ ಹಾಗೂ ಸಿಯಾ ಇಬ್ಬರೂ ಸೇರಿ, ಕೇತನ್ ಫೋಟೋಗೆ ಪೋಸ್ ನೀಡುವಾಗ ಹಿಂದಿನಿಂದ ತಳ್ಳಿ ಕೊಂದಿದ್ದರು. ಈ ಪ್ರಕರಣದ ಮಹಾರಾಷ್ಟ್ರದ ಉದ್ಯಮ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
