ಮುಂಬೈ, ಜೂನ್ 25: ಬಾಲ್ಯ ವಿವಾಹ(Child Marriage) ಎಂಬ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಮಹಾರಾಷ್ಟ್ರ ಸರ್ಕಾರ ಅತ್ಯಂತ ಕಠಿಣವಾದ ಹೊಸ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇನ್ಮುಂದೆ ಮದುವೆಯ ಆಮಂತ್ರಣ ಪತ್ರಿಕೆಗಳಲ್ಲಿ ವಧು ಮತ್ತು ವರನ ಜನ್ಮ ದಿನಾಂಕವನ್ನು ಕಡ್ಡಾಯವಾಗಿ ಮುದ್ರಿಸಬೇಕಾಗುತ್ತದೆ.
ಈ ನಿಯಮವನ್ನು ಉಲ್ಲಂಘಿಸುವ ಮುದ್ರಣಾಲಯಗಳ ಲೈಸೆನ್ಸ್ ರದ್ದು ಮಾಡುವುದಷ್ಟೇ ಅಲ್ಲದೆ, ಆ ಪ್ರೆಸ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತತ್ಕರೆ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ರಾಜಸ್ಥಾನ ಸರ್ಕಾರ ಈಗಾಗಲೇ ಯಶಸ್ವಿಯಾಗಿ ಜಾರಿಗೆ ತಂದಿರುವ ಮಾದರಿಯನ್ನು ಆಧರಿಸಿ ಮಹಾರಾಷ್ಟ್ರದಲ್ಲೂ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.
ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಹೊಸ ಜವಾಬ್ದಾರಿ
ಹೊಸ ನಿಯಮದ ಪ್ರಕಾರ, ಇನ್ಮುಂದೆ ಮದುವೆ ಕಾರ್ಡ್ ಮುದ್ರಿಸುವ ಮುನ್ನ ಪ್ರೆಸ್ ಮಾಲೀಕರು ಕೇವಲ ಜನ್ಮ ದಿನಾಂಕವನ್ನು ಹಾಕುವುದಷ್ಟೇ ಅಲ್ಲ, ವಧು-ವರರ ಅಧಿಕೃತ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸುವುದು ಕಡ್ಡಾಯವಾಗಿರುತ್ತದೆ. ಸೂಕ್ತ ವಯಸ್ಸಿನ ಪುರಾವೆ ಇಲ್ಲದೆ ಅಥವಾ ಜನ್ಮ ದಿನಾಂಕವನ್ನು ಮುದ್ರಿಸದೆ ಮದುವೆ ಪತ್ರಿಕೆಗಳನ್ನು ಮುದ್ರಿಸಿಕೊಟ್ಟರೆ, ಅಂತಹ ಮುದ್ರಣಾಲಯಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ.
ಪುರೋಹಿತರು, ಬ್ಯಾಂಡ್ ಮತ್ತು ಅಡುಗೆಯವರಿಗೂ ಬೀಳಲಿದೆ ಕಾನೂನು ಪೆಟ್ಟು
ಬಾಲ್ಯ ವಿವಾಹಗಳನ್ನು ತಡೆಯಲು ಸರ್ಕಾರ ಕೇವಲ ಪೋಷಕರನ್ನು ಮಾತ್ರವಲ್ಲದೆ, ಇಡೀ ವ್ಯವಸ್ಥೆಯನ್ನು ನಿಯಂತ್ರಿಸಲು ಮುಂದಾಗಿದೆ. ಅಪ್ರಾಪ್ತ ವಯಸ್ಕರ ಮದುವೆ ನಡೆದರೆ ಆಯಾ ಕುಟುಂಬದವರ ಜೊತೆಗೆ ಮದುವೆ ಮಾಡಿಸುವ ಪುರೋಹಿತರು, ಮದುವೆಯಲ್ಲಿ ಸಂಗೀತ ನುಡಿಸುವ ಬ್ಯಾಂಡ್ ಸಿಬ್ಬಂದಿ, ಮದುವೆಯ ಅಡುಗೆ ವ್ಯವಸ್ಥಾಪಕರು ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದಿಗೂ ಭೀಕರ ಪ್ರಮಾಣದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಮತ್ತಷ್ಟು ಓದಿ: ಮಂಡ್ಯ ಜಿಲ್ಲೆಯಲ್ಲಿ 1,354 ಬಾಲಗರ್ಭಿಣಿಯರು ಪತ್ತೆ: ಲೋಕಾಯುಕ್ತ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು!
ಶೇ. 48 ರಷ್ಟು ಹುಡುಗಿಯರಿಗೆ 18 ವರ್ಷ ತುಂಬುವ ಮುನ್ನವೇ ಮದುವೆ ಮಾಡಲಾಗುತ್ತಿದೆ. ಶೇ. 43.7 ರಷ್ಟು ಬಾಲ್ಯ ವಿವಾಹಗಳು ನಡೆಯುತ್ತಿವೆ. ಕ್ರಮವಾಗಿ ಶೇ. 40.5 ಹಾಗೂ ಶೇ. 40.3 ರಷ್ಟು ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ವಿವಾಹವಾಗುತ್ತಿದೆ. ವಿಶೇಷವಾಗಿ ವಲಸೆ ಕಾರ್ಮಿಕರು ಹೆಚ್ಚಿರುವ ಭಾಗದಲ್ಲಿ ಈ ಸಮಸ್ಯೆ ತೀವ್ರವಾಗಿದೆ.
ಬಾಲ್ಯ ವಿವಾಹ ತಡೆ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮೂರು ಪ್ರಮುಖ ಬದಲಾವಣೆಗಳನ್ನು ತರುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ (DC) ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚನೆಯಾಗಲಿದ್ದು, ದೂರು ಬಂದ ತಕ್ಷಣವೇ ದಾಳಿ ನಡೆಸಲಾಗುತ್ತದೆ. ಬಾಲ್ಯ ವಿವಾಹದ ಆರೋಪಿಗಳಿಗೆ ತಕ್ಷಣವೇ ಶಿಕ್ಷೆ ವಿಧಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.
ಸಾರ್ವಜನಿಕರು ಅಥವಾ ನೆರೆಹೊರೆಯವರು ತಮಗೆ ತಿಳಿಯದಂತೆ ಗೌಪ್ಯವಾಗಿ ಬಾಲ್ಯ ವಿವಾಹಗಳ ಬಗ್ಗೆ ದೂರು ನೀಡಲು ವಿಶೇಷ ವೆಬ್ಸೈಟ್ ಆರಂಭಿಸಲಾಗುವುದು. ಈ ಹೊಸ ಮಸೂದೆಗೆ ಶೀಘ್ರದಲ್ಲೇ ಅಧಿಕೃತ ಕಾನೂನಿನ ಮುದ್ರೆ ಬೀಳಲಿದ್ದು, ಸರ್ಕಾರದಿಂದ ಆದೇಶ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ