ಬೆಂಗಳೂರು, ಜೂನ್ 25: ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಹುದ್ದೆಗಳ ಕಡಿತ ವಿರೋಧಿಸಿ ಪ್ರಾಥಮಿಕ ಶಾಲಾ ಶಿಕ್ಷಕ ಆಕಾಂಕ್ಷಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ಕಾಂತ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಯುವಕರು ಭಾಗವಹಿಸಿದರು. ಪ್ರತಿಭಟನಾಕಾರರ ಪ್ರಕಾರ, ಕಳೆದ 11 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ 4,424 ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ದೊರೆತಿದ್ದರೂ, ನಂತರ ಅದನ್ನು ರದ್ದುಪಡಿಸಿ 800 ಹುದ್ದೆಗಳಿಗೆ ಇಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಸುಮಾರು 30,000ಕ್ಕೂ ಹೆಚ್ಚು ಟಿಇಟಿ ಅರ್ಹ ಅಭ್ಯರ್ಥಿಗಳಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಒಟ್ಟಾರೆ 80,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.
ಸಂವಿಧಾನದ 371ಜೆ ಕಲಂ ಅನ್ವಯ ಕಲ್ಯಾಣ ಕರ್ನಾಟಕದಲ್ಲಿ ಶೇಕಡಾ 80ರಷ್ಟು ಹುದ್ದೆಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಅಗತ್ಯವಿಲ್ಲ. ಆದರೂ ಸರ್ಕಾರ ನೇಮಕಾತಿ ವಿಳಂಬ ಮಾಡುತ್ತಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ. 4,424 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವವರೆಗೂ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ