ದಾವಣಗೆರೆ, (ಮೇ 06): ಅಜ್ಜ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ (Davanagere South) ವಿಧಾಸಭೆಗೆ ನಡೆದ ಉಪಚುನಾವಣೆಯಲ್ಲಿ ಮೊಮ್ಮಗ ಸಮರ್ಥ ಶಾಮನೂರು (Samarth Shamanur) ಗೆದ್ದು ಬೀಗಿದ್ದು, ಇದರೊಂದಿಗೆ ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಇನ್ನು ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್ಎಸ್ ಮಲ್ಲಿಕಾರ್ಜುನ ಅವರು 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಅದರಂತೆ ಇದೀಗ ಪುತ್ರ ಸಮರ್ಥ ಸಹ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತಂದೆ ರೀತಿಯಲ್ಲೇ ಚಿಕ್ಕ ವಯಸ್ಸಿನಲ್ಲೇ ಅಂದರೆ 27ನೇ ವಯಸ್ಸಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಇನ್ನು ಇದೇ ಖುಷಿಯಲ್ಲಿ ಅವರು ತಮ್ಮ ಮದುವೆ (marriage) ಬಗ್ಗೆ ಮಾತನಾಡಿ, ಸದ್ಯಕ್ಕೆ ಮದ್ವೆ ಮಾಡಿಕೊಳ್ಳಲ್ಲ ಎಂದಿದ್ದಾರೆ.
ಇನ್ನು ಬೈ ಎಲೆಕ್ಷನ್ನಲ್ಲಿ ಗೆದ್ದು ಶಾಸಕರಾದ ಬಳಿಕ ಮೊದಲ ಬಾರಿಗೆ ದಾವಣಗೆರೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮರ್ಥ್ ಶಾಮನೂರು, ನಾನು ನನ್ನ ಅಜ್ಜನ ರೀತಿಯಲ್ಲಿ ಅಜಾತಶತ್ರು ಆಗುತ್ತೇನೆ. ಅದೇ ನನ್ನ ಉದ್ದೇಶ. ಜನತೆ ಪಾಲಿಗೆ ನಮ್ಮ ಮನೆ ಮತ್ತು ಮನಸ್ಸಿನ ಬಾಗಿಲು ತೆರೆದಿರುತ್ತದೆ. ನಮಗೆ ಅಭಿವೃದ್ಧಿ ಮಾಡುವ ಸಾಮರ್ಥ್ಯ ಇದೇ ಎಂಬ ಕಾರಣಕ್ಕಾಗಿಯೇ ನಮ್ಮನ್ನ ದಾವಣಗೆರೆ ದಕ್ಷಿಣ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ. ನಮ್ಮ ಮನೆಗೆ ಯಾಗಲು ಬಂದರು ಬಾಗಿಲು ತೆರೆದಿರುತ್ತದೆ. ಜೊತೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರ ಜನ ಸಂಪರ್ಕ ಕಚೇರಿ ಆರಂಭಿಸುತ್ತೇವೆ ಎಂದರು.
ಇನ್ನು ಇದೇ ವೇಳೆ ಮದುವೆ ಬಗ್ಗೆ ಕೇಳಿದ ಪ್ರಶ್ನಿಗೆ ಪ್ರತಿಕ್ರಿಯಿಸಿದ ಸಮರ್ಥ್, ಸದ್ಯಕ್ಕೆ ಮದ್ವೆ ವಿಚಾರ ಇಲ್ಲ, ಜನರು ಈಗ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮದ್ವೆ ರೀತಿಯಲ್ಲಿ ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಮದುವೆ ಏನಿಲ್ಲ ಎಂದು ತಿಳಿಸಿದರು.
ಇದನ್ನೂ ನೋಡಿ: ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆದ್ದರೂ ಕಾಂಗ್ರೆಸ್ಗೆ ತಪ್ಪದ ಚಿಂತೆ: ಕಾರಣ ಇಲ್ಲಿದೆ
