
ಮಡಿಕೇರಿ/ ಚಿಕ್ಕಮಗಳೂರು, ಮಾರ್ಚ್ 12: ಮದ್ಯದ ನಶೆಯಲ್ಲಿ ವ್ಯಕ್ತಿಯೋರ್ವ ಅಣ್ಣ, ತಂಗಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ನಡೆದಿದೆ. ಯಶೋಧಾ(45), ಕುಂಞರಾಮ(47) ಮೃತ ದುರ್ದೈವಿಗಳಾಗಿದ್ದು, ಆರೋಪಿ ಚಂದು(65) ಎಂಬಾತನನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಒಡ ಹುಟ್ಟಿದವರನ್ನು ಆರೋಪಿ ಕೊಂದಿದ್ದು, ಸ್ಥಳಕ್ಕೆ ಕೊಡಗು ಎಸ್ಪಿ ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅವಳಿ ಕೊಲೆ ಆರೋಪಿಗೆ ಮರಣದಂಡನೆ
ಮಹಿಳೆಯೋರ್ವಳ ಜೊತೆಗಿನ ಅನೈತಿಕ ಸಂಬಂಧ ವಿಚಾರವಾಗಿ ಆಕೆ ಮತ್ತು ಅವಳ ಪತಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ. 2019ರ ಆಗಸ್ಟ್ 30ರಂದು ಮನೆಯಲ್ಲಿ ಮಲಗಿದ್ದ ಗಂಡ-ಹೆಂಡತಿಯನ್ನು ಆರೋಪಿ ಗೋವಿಂದಪ್ಪ ಎಂಬಾತ ಹತ್ಯೆ ಮಾಡಿದ್ದ. ಚಿಕ್ಕಮಗಳೂರು ಜಿಲ್ಲೆಯ NR ಪುರ ತಾಲೂಕಿನ ಸಾತ್ಕೋಳಿಯಲ್ಲಿ ನಡೆದಿದ್ದ ಘಟನೆ ಗ್ರಾಮಕ್ಕೆ ಗ್ರಾಮವನ್ನೇ ಬೆಚ್ಚಿಬೀಳಿಸಿತ್ತು. ಆರೋಪಿ ಮಚ್ಚಿನಿಂದ ದಾಳಿ ನಡೆಸಿದ್ದ ಪರಿಣಾಮ ಧರ್ಮಯ್ಯ (53) ಮತ್ತು ಭಾರತಿ (33) ಮೃತಪಟ್ಟಿದ್ದರು.
ಇದನ್ನೂ ಓದಿ: 10 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿ; ಗ್ರಾ.ಪಂ. ಮಾಜಿ ಸದಸ್ಯೆ ದಾರುಣ ಸಾವು
ಭಾರತಿಯೊಂದಿಗೆ ಆರೋಪಿ ಗೋವಿಂದಪ್ಪನಿಗೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರವಾಗಿ ಗೋವಿಂದಪ್ಪನ ಜೊತೆ ಭಾರತಿ ಪತಿ ಧರ್ಮಯ್ಯ ಜಗಳವಾಡಿದ್ದ. ಬಳಿಕ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಕೂಡ ನಡೆದಿತ್ತು. ಗಲಾಟೆ ನಡೆದ ಎರಡು ತಿಂಗಳ ಬಳಿಕ ಭಾರತಿ ಮತ್ತು ಪತಿ ಧರ್ಮಯ್ಯನನ್ನು ಗೋವಿಂದಪ್ಪ ಹತ್ಯೆ ಮಾಡಿದ್ದು, ಈ ಬಗ್ಗೆ NR ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ಸಂಬಂಧ ಮಹತ್ವದ ತೀರ್ಪು ನೀಡಿರುವ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆಯ ಜೊತೆಗೆ 20 ಸಾವಿರ ರೂ. ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.