ನವದೆಹಲಿ/ಚೆನ್ನೈ, ಜುಲೈ 01: ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ–1958ರ ವ್ಯಾಪ್ತಿಯನ್ನು ಮೀರಿ ನೀಡಲಾಗಿದೆ ಎಂದು ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿದೆ. ಮೇ 27ರಂದು ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀನಾರಾಯಣ್ ಅವರ ವಿಭಾಗೀಯ ಪೀಠವು, ಕಾಯ್ದೆಯಡಿ ಅನುಮತಿಸಲಾದ ಸಂದರ್ಭಗಳನ್ನು ಹೊರತುಪಡಿಸಿ, ಬಕ್ರೀದ್ ಸೇರಿದಂತೆ ಯಾವುದೇ ದಿನ ಹಸು ಅಥವಾ ಕರುವಿನ ಹತ್ಯೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಸರ್ಕಾರದ ವಾದವೇನು?
ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ–1958ರ ಸೆಕ್ಷನ್ 4ರ ಪ್ರಕಾರ, 10 ವರ್ಷ ಮೇಲ್ಪಟ್ಟ, ಕೆಲಸಕ್ಕೆ ಅಥವಾ ಸಂತಾನೋತ್ಪತ್ತಿಗೆ ಅಯೋಗ್ಯವೆಂದು ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣೀಕರಿಸಲ್ಪಟ್ಟ ಹಸುವನ್ನು ಮಾತ್ರ ವಧೆ ಮಾಡಲು ಅವಕಾಶವಿದೆ. ಆದರೆ ಹೈಕೋರ್ಟ್ ಈ ಕಾನೂನು ಚೌಕಟ್ಟನ್ನು ಮೀರಿ ಸಂಪೂರ್ಣ ನಿಷೇಧ ಹೇರಿರುವುದು ಕಾನೂನು ವ್ಯಾಪ್ತಿಯನ್ನು ಮೀರಿದ ಕ್ರಮ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣ; ಹೇಗಿತ್ತು ಗೊತ್ತಾ ಆರೋಪಿಗಳ ಕಳ್ಳಾಟ? ಸ್ಫೋಟಕ ಮಾಹಿತಿ ರಿವೀಲ್
ಹೈಕೋರ್ಟ್ ಆದೇಶ ಏನು?
ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಮಕ್ಕಳ್ ಕಚ್ಚಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ, ಅದನ್ನು ತಡೆಯುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ವೇಳೆ ಭಾರತ ಸಂವಿಧಾನದ ವಿಧಿ 48ನ್ನು ಉಲ್ಲೇಖಿಸಿದ್ದ ಹೈಕೋರ್ಟ್, ಹಸು, ಕರು ಹಾಗೂ ಹಾಲು ಮತ್ತು ಕೃಷಿಗೆ ಉಪಯುಕ್ತ ಜಾನುವಾರುಗಳ ಹತ್ಯೆಯನ್ನು ತಡೆಯಲು ರಾಜ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು. ಬಕ್ರೀದ್ ಸಂದರ್ಭದಲ್ಲಿ ಗೋಹತ್ಯೆ ಮಾಡುವುದು ಇಸ್ಲಾಂ ಧರ್ಮದ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪುಗಳನ್ನೂ ಉಲ್ಲೇಖಿಸಿತ್ತು.
ಬಹಳಷ್ಟು ಮುಸ್ಲಿಮರು ಬಕ್ರೀದ್ ದಿನ ಗೋವನ್ನು ಬಲಿ ನೀಡುವುದಿಲ್ಲ. ಗೋವನ್ನು ಬಲಿ ನೀಡುವುದು ಇಸ್ಲಾಂ ಧರ್ಮದ ಕಡ್ಡಾಯ ಆಚರಣೆಯಲ್ಲ. ಬಕ್ರೀದ್ ಸಂದರ್ಭದಲ್ಲಿ ಯಾವುದೇ ಪ್ರಾಣಿಯನ್ನು ಬಲಿ ನೀಡಬಹುದು; ಅದಕ್ಕೆ ಗೋಹತ್ಯೆಯೇ ಏಕೈಕ ಮಾರ್ಗವಲ್ಲ ಎಂದು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪಿನಲ್ಲಿ ಹೇಳಿರುವುದನ್ನು ಹೈಕೋರ್ಟ್ ತಿಳಿಸಿತ್ತು. ಆದರೀಗ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
