ಬೆಂಗಳೂರು, (ಫೆಬ್ರವರಿ 17): ಕೋಗಿಲು ಲೇಔಟ್ (Kogilu layout) ನಿರಾಶ್ರಿತರು ಮನೆಗಾಗಿ ಕಾಯುತ್ತಿದ್ದರು. ಆದರೆ ಇದೀಗ ಮನೆ ಸಿಗುವುದು ಡೌಟ್ ಎನ್ನಲಾಗುತ್ತಿದೆ. ಯಾರಿಗೂ ಮನೆ ಕೊಡಕ್ಕೆ ಆಗಲ್ಲ ಅಂತ ಸಿಎಂ ಸಿದ್ದರಾಮಯ್ಯಗೆ ಅಧಿಕಾರಿಗಳು ತಿಳಿಸಿರುವ ಬಗ್ಗೆ ಮಾಹತಿ ಲಭ್ಯವಾಗಿದೆ. ಹೀಗಾಗಿ ಮನೆಗಾಗಿ ಕಾಯುತ್ತಿರುವ ಕೋಗಿಲು ಲೇಔಟ್ ನಿರಾಶ್ರಿತರಿಗೆ ಆಘಾತ ಎದುರಾಗಿದೆ. ಹೀಗಾಗಿ ಕೋಗಿಲು ಸ್ಲಂ ನಿವಾಸಿಗಳ ಹೋರಾಟ ಸಮಿತಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಕೋಗಿಲು ಸ್ಲಂ ನಿವಾಸಿಗಳ ಹೋರಾಟ ಸಮಿತಿ ಸಂಚಾಲಕಿ ಗೌರಮ್ಮ ಟಿವಿ9ಗೆ ಪ್ರತಿಕ್ರಿಯಿಸಿದ್ದು,
ಎಲ್ಲಾ ನಿರಾಶ್ರಿತರಿಗೆ ಮನೆ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಹೊಸ ವರ್ಷಕ್ಕೆ ಗಿಫ್ಟ್ ಕೊಡುತ್ತೇವೆ ಅಂತ ಭರವಸೆ ನೀಡಿತ್ತು. ವಿಪಕ್ಷಗಳು ಅಲ್ಲಿಗೆ ಹೋಗುವ ಸುಳ್ಳು ಆರೋಪ ಮಾಡಿದ್ದರು. ಕೊನೆಗೂ ಮೊದಲ ಹಂತದಲ್ಲಿ 26 ಕುಟುಂಬಗಳಿಗೆ ಮನೆ ಸಿಗುವ ಸಾಧ್ಯತೆ ಇತ್ತು . ಈಗ ಯಾರಿಗೂ ಮನೆ ಸಿಗಲ್ಲ, ಅರ್ಹರು ಯಾರೂ ಇಲ್ಲ ಎಂಬ ವದಂತಿ ಹರಿದಾಡುತ್ತಿದೆ.ನಾವು ಕೃಷ್ಣ ಬೈರೇಗೌಡ ಹಾಗೂ ಜಮೀರ್ ಅವರನ್ನು ಭೇಟಿ ಮಾಡಿದ್ದೆವು, ಆಗ ಸಕಾರಾತ್ಮಕವಾಗಿ ಸ್ಪಂದಿಸಿದರು. ಮನೆಗಳನ್ನು ಕೆಡವಿ ಎರಡು ತಿಂಗಳಾಗುತ್ತಾ ಬಂದರೂ ಯಾರಿಗೂ ಮನೆ ಸಿಕ್ಕಿಲ್ಲ.ಅಲ್ಲಿ ಯಾರೂ ಕೂಡ ಅಕ್ರಮ ವಾಸ ಮಾಡುತ್ತಿಲ್ಲ. ಪುನರ್ ವಸತಿ ಕೊಡೋದು ಸರ್ಕಾರದ ಜವಾಬ್ದಾರಿ . ಸರ್ಕಾರ ಕೊಟ್ಟ ಮಾತಿನಂತೆ ನಡೆಯದೆ ಹೋದರೆ ಹೋರಾಟ ಸಮಿತಿ ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿದರು.
