Headlines

ಮನೆಯಲ್ಲಿ ಗರ್ಭಿಣಿ ಹೆಂಡತಿಗೆ ಬೇರೆ ಜಾತಿ ಎಂದು ಕಿರುಕುಳ: ಹೆತ್ತವರ ಮೇಲೆ ದೂರು ನೀಡಿದ ಮಗ – Kannada News | Inter Caste Marriage Harassment: Nelamangala Couple Faces Threats, Police Complaint

ನೆಲಮಂಗಲ, ಏ.14: ಪ್ರೀತಿಸಿ ಮದುವೆಯಾದ ಜೋಡಿಗೆ ಜಾತಿಯ ಹೆಸರಿನಲ್ಲಿ ಕಿರುಕುಳ ನೀಡಿ, ಕೊಲೆ ಬೆದರಿಕೆ ಹಾಕಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್‌ನಲ್ಲಿ ಬೆಳಕಿಗೆ ಬಂದಿದೆ. ಸದ್ಯ 6 ತಿಂಗಳ ಗರ್ಭಿಣಿಯಾಗಿರುವ ಸೊಸೆಗೆ ಸ್ವಂತ ಅತ್ತೆ-ಮಾವನೇ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದು, ಈ ಸಂಬಂಧ ದಂಪತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹೆತ್ತವರ ಮೇಲೆ ಸ್ವತಃ ಮಗನೇ ದೂರು ನೀಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ನೆಲಮಂಗಲದ ಸುಭಾಷ್ ನಗರದ ನಿವಾಸಿಗಳಾದ ಅಭಿಷೇಕ್ ಮತ್ತು ವಿದ್ಯಾಶ್ರೀ ಕಳೆದ ಎರಡು ವರ್ಷಗಳ ಹಿಂದೆ ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದರೂ, ಎಂಟು ತಿಂಗಳ ಹಿಂದೆ ಈ ಜೋಡಿ ಕರಿ ಕಾಟೇರಮ್ಮ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದರು.

ವಿದ್ಯಾಶ್ರೀ ಬೇರೆ ಜಾತಿಯವರು ಎಂಬ ಕಾರಣಕ್ಕೆ ಮದುವೆಯಾದ ದಿನದಿಂದಲೂ ಅಭಿಷೇಕ್ ಪೋಷಕರಾದ ಮುನಿಶಂಕರಯ್ಯ ಮತ್ತು ಆನಂದಮ್ಮ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದೀಗ ವಿದ್ಯಾಶ್ರೀ 6 ತಿಂಗಳ ಗರ್ಭಿಣಿಯಾಗಿದ್ದು, ಇಂತಹ ಸಂದರ್ಭದಲ್ಲೂ ಆಕೆಯನ್ನು ಮನೆಗೆ ಸೇರಿಸಿಕೊಳ್ಳದೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: “ನನ್ನನ್ನ ಯಾಕೆ ಮದುವೆಯಾಗಲ್ಲ?”: ನಡುರಸ್ತೆಯಲ್ಲೇ ಯುವತಿಯನ್ನು ಬೆದರಿಸಿದ ಮುಸ್ತಫಾ ಖಾದ್ರಿ; ವಿಡಿಯೋ ವೈರಲ್

ತಮ್ಮ ಪ್ರೀತಿಯ ಸಂಕೇತವಾಗಿ ಮಗು ಬರಲಿರುವ ಈ ಸುಸಂದರ್ಭದಲ್ಲಿ ಪತ್ನಿಯ ರಕ್ಷಣೆಗಾಗಿ ಪತಿ ಅಭಿಷೇಕ್ ಸಾಹಸಕ್ಕೆ ಮುಂದಾಗಿದ್ದಾರೆ. ಸ್ವಂತ ತಂದೆ-ತಾಯಿ ವಿರುದ್ಧವೇ ಅವರು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *