
ನವದೆಹಲಿ, ಮಾರ್ಚ್ 25: ಕೇಂದ್ರ ಸರ್ಕಾರ ಅಗತ್ಯವಿರುವಷ್ಟು ಇಂಧನ ಹಾಗೂ ಎಲ್ಪಿಜಿ ಸಂಗ್ರಹವಿದೆ ಎಂದು ಹೇಳಿಕೆ ನೀಡುತ್ತಿದ್ದರೂ ಎಲ್ಪಿಜಿ (LPG) ಬುಕ್ ಮಾಡಿದ ಹಲವು ದಿನಗಳ ಬಳಿಕ ಸಿಲಿಂಡರ್ಗಳು ಸಿಗುತ್ತಿವೆ. ಇದೆಲ್ಲದರ ನಡುವೆ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಒಂದುವೇಳೆ ನಿಮ್ಮ ಮನೆಯಲ್ಲಿ ಪೈಪ್ಡ್ ಗ್ಯಾಸ್ (ಪಿಎನ್ಜಿ) ಕನೆಕ್ಷನ್ ಇದ್ದರೂ ನೀವು ಅದನ್ನು ಬಳಸದಿದ್ದರೆ ನಿಮ್ಮ ಎಲ್ಪಿಜಿ ಪೂರೈಕೆ ಕೂಡ ಕಟ್ ಆಗುತ್ತದೆ. ಪಿಎನ್ಜಿ ಹಾಗೂ ಎಲ್ಪಿಜಿ ಎರಡನ್ನೂ ಬಳಸುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿಮ್ಮ ಏರಿಯಾದಲ್ಲಿ ಪೈಪ್‌ಲೈನ್ ಇದ್ದರೂ ನೀವು ಸಂಪರ್ಕ ಪಡೆಯದಿದ್ದರೆ 3 ತಿಂಗಳೊಳಗೆ ಸಂಪರ್ಕ ಪಡೆಯಲು ಗಡುವು ನೀಡಲಾಗಿದೆ. ಈ ಕುರಿತು ನೋಟಿಸ್ ಮೂಲಕ ಆ ಮನೆಯ ಗಮನಕ್ಕೆ ತಂದ 3 ತಿಂಗಳ ನಂತರ ಆ ಮನೆಗಳಿಗೆ ಎಲ್ಪಿಜಿ ಪೂರೈಕೆಯನ್ನು ನಿಲ್ಲಿಸಲಾಗುತ್ತದೆ.
ಗ್ರಾಹಕರು ಪೈಪ್ಡ್ ನೈಸರ್ಗಿಕ ಅನಿಲ (PNG)ದ ಕನೆಕ್ಷನ್ ಇದ್ದರೂ ಬಳಸದಿದ್ದರೆ 3 ತಿಂಗಳ ನಂತರ ಆ ಮನೆಗಳಿಗೆ LPG ಸಿಲಿಂಡರ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಪೈಪ್‌ಲೈನ್ ಗ್ಯಾಸ್ ಜಾಲದ ವಿಸ್ತರಣೆಯನ್ನು ವೇಗಗೊಳಿಸಲು ಮತ್ತು ಒಂದೇ ಇಂಧನ ಮೂಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಪ್ರವಾಸೋದ್ಯಮಕ್ಕೂ ತಟ್ಟಿದ LPG ಅಭಾವ: ಕರಾವಳಿ ಖಾದ್ಯಗಳಿಗೆ ಬ್ರೇಕ್; ಪ್ರವಾಸಿಗರಿಗೆ ನಿರಾಶೆ
ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳು PNG ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇದನ್ನು ಪೈಪ್‌ಲೈನ್‌ಗಳ ಮೂಲಕ ಅಡುಗೆಮನೆಯ ಬರ್ನರ್‌ಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ. ಇದು ಗ್ಯಾಸ್ ಬುಕಿಂಗ್ ರೀಫಿಲ್ಲಿಂಗ್ ಅಗತ್ಯವನ್ನು ನಿವಾರಿಸುತ್ತದೆ. ಪೈಪ್‌ಲೈನ್‌ಗಳಿಲ್ಲದ ಪ್ರದೇಶಗಳಿಗೆ LPG ಅನ್ನು ಪೂರೈಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಗ್ಯಾಸ್ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?
ಪೈಪ್‌ಲೈನ್‌ಗಳನ್ನು ಹಾಕಲು ಅನುಮತಿಗಳನ್ನು ಇನ್ನು ನಿಗದಿತ ಸಮಯದೊಳಗೆ ನೀಡಬೇಕು. ಒಂದುವೇಳೆ ನೀವು ಅನುಮತಿ ನೀಡದಿದ್ದರೆ ಅವುಗಳನ್ನು ಅನುಮೋದಿಸಲಾಗಿದೆ ಎಂದೇ ಪರಿಗಣಿಸಲಾಗುತ್ತದೆ. ಅಧಿಕಾರಿಗಳು ಸೂಚಿಸಿದ ಶುಲ್ಕಗಳನ್ನು ಮೀರಿ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದನ್ನು ನಿಷೇಧಿಸಲಾಗಿದೆ. ವಸತಿ ಸಂಕೀರ್ಣಗಳಲ್ಲಿ 3 ಕೆಲಸದ ದಿನಗಳಲ್ಲಿ ಒಳಗೆ ಪ್ರವೇಶವನ್ನು ನೀಡಬೇಕು, ಪಿಎನ್ಜಿಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ ಎಂದು ಕೂಡ ಸರ್ಕಾರ ಆದೇಶಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ