ಮನೆಯಲ್ಲಿ ಸುಲಭವಾಗಿ ಬೆಳೆಸ್ಬೋದು ತಾಜಾ ಕೊತ್ತಂಬರಿ ಸೊಪ್ಪು; ನಿಮಗಾಗಿ ಇಲ್ಲಿದೆ ಸಲಹೆ – Kannada News | Grow coriander at home with these simple tips

ಅಡುಗೆಯ ಘಮ ಮತ್ತು ರುಚಿಯನ್ನು ಹೆಚ್ಚಿಸುವಲ್ಲಿ ಕೊತ್ತಂಬರಿ ಸೊಪ್ಪು (Coriander leaves) ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ಇದು ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಆರೋಗ್ಯ ಪ್ರಯೋಜನ ಮತ್ತು ಅಡುಗೆಯ ರುಚಿ, ಪರಿಮಳವನ್ನು ಹೆಚ್ಚಿಸುವ ಕಾರಣ ಬಹುತೇಕ ಎಲ್ಲರೂ ಸಾಂಬಾರ್‌, ರಸಂ, ಚಟ್ನಿ, ಪಲ್ಯ ಇತ್ಯಾದಿ ಅಡುಗೆಗಳಿಗೆ ಕೊತ್ತಂಬರಿ ಸೊಪ್ಪನ್ನು ಸೇರಿಸುತ್ತಾರೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಫ್ರೆಶ್‌ ಆಗಿ ಮನೆಯಲ್ಲಿಯೇ ಬೆಳೆಯಬಹುದು. ಹೌದು ಈ ಕೆಲವೊಂದು ಟಿಪ್ಸ್‌ಗಳ ಸಹಾಯದಿಂದ ಪಾಟ್‌ನಲ್ಲಿಯೂ ಸುಲಭವಾಗಿ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದು.

ಮನೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯಲು ಈ ಹಂತಗಳನ್ನು ಪಾಲಿಸಿ:

ಪಾಟ್‌ ಆಯ್ಕೆ: ಸ್ವಂತ ಮನೆಯಲ್ಲಿರುವವರು ಮನೆಯಂಗಳ, ಹಿತ್ತಲಿನಲ್ಲಿ ಬೆಳೆಯಬಹುದು. ಫ್ಲ್ಯಾಟ್‌ಗಳಲ್ಲಿ ಇರುವವರೂ ಸಹ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದು. ಕೊತ್ತಂಬರಿ ಸೊಪ್ಪು ಬೆಳೆಯಲು, ಮೊದಲು ಕನಿಷ್ಠ 6 ರಿಂದ 8 ಇಂಚು ಆಳವಿರುವ ಪಾಟ್‌ ಅಥವಾ ಪಾತ್ರೆಯನ್ನು ಆರಿಸಿ. ಪಾಟ್‌ ಅಗಲವಾಗಿರುವಂತೆ ನೋಡಿಕೊಳ್ಳಿ.

ಮಣ್ಣಿನ ಆಯ್ಕೆ: ಮಣ್ಣಿನ ಆಯ್ಕೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಕೊತ್ತಂಬರಿ ಸೊಪ್ಪು ಬೆಳೆಯಲು, ಮಣ್ಣು ಸಡಿಲವಾಗಿರಬೇಕು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು. ಇದಕ್ಕಾಗಿ ತೋಟದ ಮಣ್ಣಿಗೆ ಪೋಷಕಾಂಶಗಳನ್ನು ಒದಗಿಸುವ ಹಸುವಿನ ಗೊಬ್ಬರ ಅಥವಾ ವರ್ಮಿಕಾಂಪೋಸ್ಟ್  ಮರಳು ಅಥವಾ ಕೊಕೊಪೀಟ್ ಬೆರೆಸಿ ಪಾಟ್‌ನಲ್ಲಿ ಹಾಕಿಡಿ.

ಕೊತ್ತಂಬರಿ ಬೀಜಗಳ ಆಯ್ಕೆ: ಮಾರುಕಟ್ಟೆಯಿಂದ ಉತ್ತಮ ಗುಣಮಟ್ಟದ ಕೊತ್ತಂಬರಿ ಬೀಜಗಳನ್ನು ಖರೀದಿಸಿ ಮತ್ತು ಆ ಬೀಜಗಳು ಮುರಿದು ಹೋಗಿಲ್ಲ ಅಥವಾ ಯಾವುದೇ ಹಾನಿಗೊಳಗಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯಕರ ಬೀಜಗಳನ್ನೇ ಆಯ್ಕೆ ಮಾಡಿ. ಈ ಕೊತ್ತಂಬರಿ ಬೀಜಗಳನ್ನು ಅವುಗಳನ್ನು ಸಮತಟ್ಟಾದ ಮೇಲ್ಮೈನಲ್ಲಿ ಇರಿಸಿ ಬೀಜ ಎರಡು ಭಾಗಗಳಾಗುವಂತೆ ಲಘುವಾಗಿ ಪುಡಿಮಾಡಿ.

ಇದನ್ನೂ ಓದಿ: ಜಸ್ಟ್‌ ಟಿಪ್ಸ್‌ ಪಾಲಿಸುವ ಮೂಲಕ ಮನೆಯಂಗಳದಲ್ಲಿಯೇ ಸುಲಭವಾಗಿ ಬೆಳೆಯಬಹುದು ಕರಿಬೇವಿನ ಗಿಡ

ಬೀಜ ಬಿತ್ತುವ ಪ್ರಕ್ರಿಯೆ: ಎರಡು ಭಾಗಗಳನ್ನಾಗಿ ವಿಂಗಡಿಸಿದ ಬಳಿಕ ಕೊತ್ತಂಬರಿ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಇದು ಸಿಪ್ಪೆಯನ್ನು ಮೃದುಗೊಳಿಸುತ್ತದೆ ಮತ್ತು ಅವು ವೇಗವಾಗಿ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ. ಮರುದಿನ ಬೆಳಿಗ್ಗೆ, ಬೀಜಗಳನ್ನು ನೀರಿನಿಂದ ಸೋಸಿ ಮೊದಲೇ ಪಾಟ್‌ನಲ್ಲಿ ಹಾಕಿಟ್ಟ ಮಣ್ಣಿನ ಮೇಲೆ ಹರಡಿ. ಪರ್ಯಾಯವಾಗಿ, ನೀವು ನಿಮ್ಮ ಬೆರಳಿನಿಂದ ಮಣ್ಣಿನಲ್ಲಿ ಸಣ್ಣ ರಂಧ್ರಗಳನ್ನು ಮಾಡಿ ಬೀಜಗಳನ್ನು ಅವುಗಳೊಳಗೆ ಇಡಬಹುದು.  ನಂತರ, ಮಣ್ಣನ್ನು ತೇವಗೊಳಿಸಲು ಸ್ಪ್ರೇ ಬಾಟಲಿಯಿಂದ ಸ್ವಲ್ಪ ನೀರನ್ನು ಸಿಂಪಡಿಸಿ

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಲಘುವಾಗಿ ನೀರು ಹಾಕಿ ಮತ್ತು ಮಧ್ಯಮ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಪಾಟ್‌ ಇರಿಸಿ. ಸರಿಯಾಗಿ ಅರೈಕೆ ಮಾಡಿದರೆ 10 ರಿಂದ 15 ದಿನಗಳಲ್ಲಿ ಬೀಜಗಳಿಂದ ಗಿಡ ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಗಿಡ ಬೆಳೆದು  ಸುಮಾರು 3 ವಾರಗಳಲ್ಲಿ, ನೀವು ಫ್ರೆಶ್‌ ಮತ್ತು ಆರ್ಗಾನಿಕ್ ಕೊತ್ತಂಬರಿ ಸೊಪ್ಪನ್ನು ಕೊಯ್ಲು ಮಾಡಲು ಪ್ರಾರಂಭಿಸಬಹುದು. ಹೀಗೆ ಮನೆಯಲ್ಲಿ ಕೊತ್ತಂಬರಿ ಬೆಳೆಯುವುದು ತುಂಬಾನೇ ಸುಲಭ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *