ಮೃತ ವೈದ್ಯ ಕಿರಣ್ ಹೊನ್ನಣ್ಣನವರ್Image Credit source: Tv9 Kannada
ಧಾರವಾಡ, ಜುಲೈ 15: ಚಿರಾಯು ಆಸ್ಪತ್ರೆಯ ವೈದ್ಯ ಕಿರಣ್ ಹೊನ್ನಣ್ಣನವರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ರನ್ಕಾಸ್ಟೆಲ್ಲೋ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅವರ 10 ವರ್ಷದ ಮಗನ ಮೇಲೂ ಹಲ್ಲೆ ನಡೆಸಲಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಾರ್ಟ್ಮೆಂಟ್ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿದ್ದು, ಘಟನೆ ಸಂಬಂಧ ಡಾ.ಕಿರಣ್ ಪತ್ನಿ ಡಾ.ಪ್ರಿಯಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪತ್ನಿಯಿಂದಲೇ ಹತ್ಯೆ ಶಂಕೆ
ಡಾ.ಕಿರಣ್ ಅವರನ್ನು ಪತ್ನಿ ಪ್ರಿಯಾಳೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿಯೇ ಘಟನೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪತಿ ಕೊಂದ ಬಳಿಕ ಮಗನ ಮೇಲೂ ಹಲ್ಲೆ ನಡೆದಿದೆ. ಬಳಿಕ ಡಾ.ಪ್ರಿಯಾ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಅನುಮಾನಗಳ ವ್ಯಕ್ತವಾಗಿವೆ.
‘ಹೊರಗಿನವರ ಕೃತ್ಯ ಅಲ್ಲ’
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಂಬಂಧಿಕರು ಫೋನ್ ಮಾಡಿದಾಗ ಪತಿ ರೆಸ್ಟ್ ಮಾಡುತ್ತಿದ್ದಾರೆ ಎಂದು ಪತ್ನಿ ಪ್ರಿಯಾ ಹೇಳಿದ್ದಾರೆ. ಡಾ.ಕಿರಣ್ ಚಿರಾಯು ಆಸ್ಪತ್ತೆಯಲ್ಲಿ ಅನಸ್ತೇಶಿಯಾ ತಜ್ಞರಾಗಿದ್ದರೆ, ಪತ್ನಿ ನೇತ್ರ ವೈದ್ಯೆಯಾಗಿದ್ದರು. ಸಂಜೆಯವರೆಗೂ ಫೋನ್ ಸ್ವೀಕರಿಸದೇ ಇದ್ದಾಗ ಅನುಮಾನದಿಂದ ಸಂಬಂಧಿಕರು ಮನೆಗೆ ಬಂದು ನೋಡಿದಾಗ, ರಕ್ತದ ಮಡುವಿನಲ್ಲಿ ಅವರು ಬಿದ್ದಿರೋದು ಕಂಡಿದೆ. ಗಾಯಗೊಂಡಿರುವ ಬಾಲಕನಿಗೆ ಜೀವ ಇದ್ದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾರ್ಟ್ಮೆಂಟ್ಗೆ ಭದ್ರತೆ ಇರುವ ಕಾರಣ ಇಲ್ಲಿ ಬೇರೆಯವರು ಬಂದು ಕೊಲೆ ಮಾಡೋದು ಸಾಧ್ಯವಿಲ್ಲ. ಘಟನೆಗೆ ಸರಿಯಾದ ಕಾರಣ ಕೂಡ ಇನ್ನೂ ಗೊತ್ತಾಗಿಲ್ಲ. ಪ್ರಿಯಾ ಆಘಾತದಲ್ಲಿ ಏನೇನೋ ಹೇಳುತ್ತಿದ್ದು, ಅಸಲಿಗೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 9:22 pm, Wed, 15 July 26
