ಬೆಂಗಳೂರು, (ಜುಲೈ 8): 2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ (Gruha jyothi scheme) ಪುನರ್ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಬೆಸ್ಕಾಂ (bescom) ಮಾಹಿತಿ ನೀಡಿದೆ. ಅದರಲ್ಲೂ ಮುಖ್ಯವಾಗೊ ಬಾಡಿಗೆದಾರರ ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ. ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ ಎಸ್ಕಾಂ ಸಿಬ್ಬಂದಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿ ಅವರ ಮಾಹಿತಿ ಸಂಗ್ರಹಿಸಿ, ಘೋಷಣಾ ಪತ್ರ ಮೂಲಕ ಸಿಬ್ಬಂದಿಯೇ ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದಾರೆ. ಹೀಗಾಗಿ ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಈ ಕೆಳಗಿನ ದಾಖಲೆಗಳನ್ನು ಸಿದ್ದವಿಟ್ಟುಕೊಂಡು ಸಿಬ್ಬಂದಿಗೆ ತೋರಿಸಲು ಬೆಸ್ಕಾಂ ವಿನಂತಿಸಿದೆ.
ಬಾಡಿಗೆದಾರರು ಆತಂಕಪಡಬೇಕಿಲ್ಲ
ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸುವ ವೇಳೆ ಹಳೆ ಬಾಡಿಗೆದರರ ಆಧಾರ್ ವಿವರ ತೆಗೆದು ಹಾಕಿ ಈಗಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಲಾಗುವುದು, ಹಾಗಾಗಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ. ಈ ಹಿಂದೆ ಇದ್ದ ಬಾಡಿಗೆದಾರರ ಆಧಾರ್ ಮಾಹಿತಿಯಿಂದಾಗಿ ತಮಗೆ ಯೋಜನೆ ಸ್ಥಗಿತಗೊಳ್ಳಲಿದೆಯೇ ಎಂಬ ಆತಂಕ ಈಗಿರುವ ಬಾಡಿಗೆದಾರರಿಗೆ ಬಂದಿರಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆ: ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? 5 ಹಂತಗಳು ಇಲ್ಲಿದೆ ನೋಡಿ
ಯಾವೆಲ್ಲಾ ದಾಖಲೆಗಳು ತೋರಿಸಬೇಕು?
ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ , ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ), ರೇಷನ್ ಕಾರ್ಡ್ ತೋರಿಸಲು ಕೋರಲಾಗಿದೆ. ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಮಾಡಿದೆ. ರಾಜ್ಯದ ಐದು ಎಸ್ಕಾಂಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ಗಳ ವ್ಯಾಪ್ತಿಯಲ್ಲಿ ಪರಿಶೀಲನಾ ಕಾರ್ಯ ನಡೆಯಲಿದೆ.
ಪ್ರವರ್ಗ ಮಾಹಿತಿ ಕಡ್ಡಾಯವಲ್ಲ
ಗೃಹಜ್ಯೋತಿ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಫಲಾನುಭವಿಯ ಪ್ರವರ್ಗದ (ಜಾತಿ ಪ್ರಮಾಣಪತ್ರ) ಸಂಬಂಧಿಸಿದ ಮಾಹಿತಿ ಕೇವಲ ಐಚ್ಛಿಕವಾಗಿದೆ. ಫಲಾನುಭವಿಗಳ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.
ಫಲಾನುಭವಿಗಳಿಗೆ ಜಾತಿ ಮಾಹಿತಿ ನೀಡಲು ಇಷ್ಟವಿಲ್ಲದಿದ್ದರೆ ಮೊಬೈಲ್ ಅಪ್ಲಿಕೇಷನ್ ನಲ್ಲಿರುವ ʼಮಾಹಿತಿ ನೀಡಲು ನಿರಾಕರಣೆʼ ಎಂಬ ಆಯ್ಕೆಯನ್ನು ನಮೂದಿಸಲು ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.
ಸಹಾಯವಾಣಿ ಸಂಖ್ಯೆ: 9480816111, 9480816112, 9480816113, 9480816114 (ಸಹಾಯವಾಣಿಯು ಪ್ರತಿದಿನ ಬೆಳಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಲಭ್ಯವಿರುತ್ತದೆ).