ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಟಿಎಂಸಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ – Kannada News

ನವದೆಹಲಿ, ಜೂನ್ 9: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಒಳಗಿನ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಸಾಲು ಸಾಲು ಸಂಸದರು, ಶಾಸಕರು ಟಿಎಂಸಿಗೆ ರಾಜೀನಾಮೆ ನೀಡುತ್ತಿದ್ದಾರೆ. ಇದು 15 ವರ್ಷಗಳ ಕಾಲ ಬಂಗಾಳವನ್ನು ಆಳಿದ ಮಮತಾ ಬ್ಯಾನರ್ಜಿಗೆ (Mamata Banerjee) ದೊಡ್ಡ ಹೊಡೆತ ನೀಡಿದೆ. ಇದೀಗ ಟಿಎಂಸಿಯ ಆಂತರಿಕ ಬಂಡಾಯದ ನಡುವೆಯೇ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಟಿಎಂಸಿ ಹಿರಿಯ ನಾಯಕಿ ಸುಶ್ಮಿತಾ ದೇವ್ ಇಂದು ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಪತ್ರದ ಮೂಲಕ ಸುಶ್ಮಿತಾ ದೇವ್ ರಾಜೀನಾಮೆ ಸಲ್ಲಿಸಿದ್ದು, ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅವರ ರಾಜಕೀಯ ಭವಿಷ್ಯದ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸುಶ್ಮಿತಾ ದೇವ್ ದೆಹಲಿಯ ನಿವಾಸದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೊಂದಿಗೆ ಮುಗುಳ್ನಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ಬಂದಿದೆ.

ಇದನ್ನೂ ಓದಿ: ಟಿಎಂಸಿಯಲ್ಲೇ ಇದ್ದಿದ್ದರೆ ನನ್ನ ಕೊಲ್ಲುತ್ತಿದ್ದರು; ಮಮತಾ ಬ್ಯಾನರ್ಜಿ ವಿರುದ್ಧ ಸುಖೇಂದು ಶೇಖರ್ ರಾಯ್ ಗಂಭೀರ ಆರೋಪ

“ನಾನು ಟಿಎಂಸಿ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ದಯವಿಟ್ಟು ಇದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಬೇಕು. ರಾಜ್ಯಸಭಾ ಸದಸ್ಯೆಯಾಗಿ ನನ್ನ ಅಧಿಕಾರಾವಧಿಯಲ್ಲಿ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡಿದ ಉಪರಾಷ್ಟ್ರಪತಿಗಳು, ಗೌರವಾನ್ವಿತ ಉಪಸಭಾಪತಿಗಳು ಮತ್ತು ರಾಜ್ಯಸಭಾ ಸಚಿವಾಲಯದ ಎಲ್ಲಾ ಪದಾಧಿಕಾರಿಗಳಿಗೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಸುಶ್ಮಿತಾ ದೇವ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೊಂದಿಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಶ್ಮಿತಾ ದೇವ್, ರಾಜೀನಾಮೆ ನೀಡುವ ನಿರ್ಧಾರ ಸಂಪೂರ್ಣವಾಗಿ ನನ್ನದೇ ಆಗಿದ್ದು, ಇದಕ್ಕೆ ಯಾರ ಪ್ರಭಾವವೂ ಇಲ್ಲ ಎಂದು ತಿಳಿಸಿದ್ದಾರೆ. ತಮ್ಮ ಈ ಹೆಜ್ಜೆಯ ಹಿಂದೆ ಹಲವು ಕಾರಣಗಳಿವೆಯಾದರೂ, ಅವುಗಳನ್ನೆಲ್ಲಾ ಸಾರ್ವಜನಿಕವಾಗಿ ಬಹಿರಂಗಪಡಿಸುವ ಅಗತ್ಯವಿಲ್ಲ. ಅದೊಂದು ದೊಡ್ಡ ಕತೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿಎಂಸಿ ಬಿಕ್ಕಟ್ಟಿನ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ಈ ರಾಜೀನಾಮೆಯು ತೃಣಮೂಲ ಕಾಂಗ್ರೆಸ್‌ಗೆ ಒಂದೇ ವಾರದಲ್ಲಿ ಎದುರಾಗಿರುವ ಎರಡನೇ ರಾಜ್ಯಸಭಾ ಹಿನ್ನಡೆಯಾಗಿದೆ. ಕಳೆದ 13 ವರ್ಷಗಳಿಂದ ಮೇಲ್ಮನೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಖೇಂದು ಶೇಖರ್ ರಾಯ್ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಪತ್ರ ಬರೆದು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಸುಶ್ಮಿತಾ ದೇವ್ ಕೂಡ ರಾಜೀನಾಮೆ ನೀಡಿದ್ದಾರೆ. ಇದು ಪಕ್ಷಕ್ಕೆ ದೊಡ್ಡ ಆಘಾತವಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಭುಗಿಲೆದ್ದ ಬಂಡಾಯದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಿಧಾನಸಭೆಯಲ್ಲಿ ಟಿಎಂಸಿಯ 58 ಶಾಸಕರು ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಸಂಸದರಾಗಿದ್ದ ಸುಶ್ಮಿತಾ ದೇವ್ ಅವರು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರ 2021ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸುತ್ತಾ, ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *