ಅರ್ಜೆಂಟೀನಾ ಹಾಗೂ ಸ್ವಿಟ್ಜರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ, ಲಿಯೋನೆಲ್ ಮೆಸ್ಸಿ ಮತ್ತು ಮ್ಯಾಚ್ ರೆಫರಿ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆದಿದೆ. ಕಾನ್ಸಾಸ್ ಸಿಟಿಯಲ್ಲಿರುವ ‘ಆ್ಯರೋಹೆಡ್ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿತ್ತು.
ಇದರ ನಡುವೆ ರೆಫರಿ ಜೊವಾವೊ ಪಿನ್ಹೈರೊ ನೀಡಿದ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ, ಮೈದಾನದಲ್ಲೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಪಂದ್ಯದ ಮೊದಲಾರ್ಧದಲ್ಲಿ ಸ್ವಿಟ್ಜರ್ಲೆಂಡ್‌ಗೆ ಫ್ರೀ-ಕಿಕ್ ಅವಕಾಶ ಸಿಕ್ಕಾಗ ಮೆಸ್ಸಿ ರಕ್ಷಣಾತ್ಮಕ ಗೋಡೆಯ ಭಾಗವಾಗಿ ನಿಂತಿದ್ದರು. ಈ ವೇಳೆ ಮೆಸ್ಸಿಗೆ ರೆಫರಿ ಜೊವಾವೊ ಪಿನ್ಹೈರೊ ಉದ್ಧಟತನದ ಧಾಟಿಯಲ್ಲಿ ಜಾಗ ಬದಲಾಯಿಸುವಂತೆ ಆದೇಶಿಸಿದರು.
ರೆಫರಿಯ ಈ ವರ್ತನೆ ಮತ್ತು ಧ್ವನಿ ಮೆಸ್ಸಿ ಅವರನ್ನು ಕೆರಳಿಸಿತು. ತಕ್ಷಣವೇ ರೆಫರಿ ಹತ್ತಿರ ಹೋದ ಅರ್ಜೆಂಟೀನಾ ನಾಯಕ, ಅತ್ಯಂತ ಗಂಭೀರವಾಗಿ ತಮ್ಮೊಂದಿಗೆ ಗೌರವದಿಂದ ವರ್ತಿಸುವಂತೆ ಎಚ್ಚರಿಸಿದರು.
“ನನಗೆ ಗೌರವ ಕೊಡಿ…”
ರೆಫರಿಯ ಆಜ್ಞೆಯಿಂದ ಕುಪಿತಗೊಂಡ ಲಿಯೋನೆಲ್ ಮೆಸ್ಸಿ, “ನನ್ನೊಂದಿಗೆ ಮರ್ಯಾದೆಯಿಂದ ಮಾತನಾಡಿ. ನನ್ನನ್ನು ಅಗೌರವಿಸಬೇಡಿ. ನಾನು ನಿನ್ನೊಂದಿಗೆ ಗೌರವದಿಂದಲೇ ಮಾತನಾಡಿದ್ದೇನೆ.” ಎಂದು ಅಸಮಾಧಾನ ಹೊರಹಾಕಿದರು.
ಸಾಮಾನ್ಯವಾಗಿ ಶಾಂತ ಸ್ವಭಾವದ ಮೆಸ್ಸಿ ಮೈದಾನದಲ್ಲಿ ಇಷ್ಟು ಕೋಪಗೊಂಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಆದರೆ, ಈ ವಾಗ್ವಾದದ ವೇಳೆಯೂ ಮೆಸ್ಸಿ ತಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಶಿಸ್ತು ಕಾಪಾಡಿಕೊಂಡಿದ್ದರು. ರೆಫರಿ ಕೂಡ ಈ ಘಟನೆಗೆ ಮೆಸ್ಸಿಗೆ ಯಾವುದೇ ಹಳದಿ ಕಾರ್ಡ್ ನೀಡದೆ ಪಂದ್ಯವನ್ನು ಮುಂದುವರಿಸಿದರು. ಇದೀಗ ಈ ವಾಗ್ವಾದದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಂದ್ಯದ ಫಲಿತಾಂಶವೇನು?
ಭರ್ಜರಿ ಪೈಪೋಟಿ ನಡುವೆಯೂ ಅರ್ಜೆಂಟೀನಾ ತಂಡವು ಸ್ವಿಟ್ಜರ್ಲೆಂಡ್ ವಿರುದ್ಧ 3-1 ಗೋಲುಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ನಿಗದಿತ ಅವಧಿಯಲ್ಲಿ ಪಂದ್ಯ ಸಮಬಲಗೊಂಡಿದ್ದರಿಂದ ಹೆಚ್ಚುವರಿ ಸಮಯ ನೀಡಲಾಗಿತ್ತು.
ಈ ವೇಳೆ ಜೂಲಿಯನ್ ಅಲ್ವಾರೆಝ್ ಮತ್ತು ಲೌಟಾರೊ ಮಾರ್ಟಿನೆಝ್ ಗಳಿಸಿದ ಅದ್ಭುತ ಗೋಲುಗಳು ಅರ್ಜೆಂಟೀನಾಕ್ಕೆ ಜಯ ತಂದುಕೊಟ್ಟವು.
ಇದನ್ನೂ ಓದಿ: ಪ್ರಮುಖ ಸ್ಟ್ರೈಕರ್ಗೆ ರೆಡ್ ಕಾರ್ಡ್: ಅರ್ಜೆಂಟೀನಾ ಪಂದ್ಯದಲ್ಲಿ ಮತ್ತೆ ವಿವಾದ!
ಈ ಗೆಲುವಿನೊಂದಿಗೆ ಅರ್ಜೆಂಟೀನಾ ಸೆಮಿಫೈನಲ್ ಪ್ರವೇಶಿಸಿದ್ದು, ಸೆಮಿಫೈನಲ್ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.