Constipation And Gut Health: Hidden Complications You Need To KnowImage Credit source: Getty Images
ಮಲಬದ್ಧತೆ (Constipation) ಸಾಮಾನ್ಯ ಜೀರ್ಣಕ್ರಿಯೆಯ ಸಮಸ್ಯೆಯಾಗಿದ್ದರೂ, ದೀರ್ಘಕಾಲ ಮುಂದುವರಿದರೆ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಮಲವಿಸರ್ಜನೆಗೆ ಕಷ್ಟವಾಗುವುದು, ಗಟ್ಟಿಯಾದ ಮಲ, ಹಲವು ದಿನಗಳವರೆಗೆ ಹೊಟ್ಟೆ ಸಂಪೂರ್ಣ ಖಾಲಿಯಾಗದಿರುವುದು ಇದರ ಪ್ರಮುಖ ಲಕ್ಷಣಗಳು. ಕಡಿಮೆ ಫೈಬರ್ ಇರುವ ಆಹಾರ, ನೀರು ಕಡಿಮೆ ಕುಡಿಯುವುದು, ವ್ಯಾಯಾಮದ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿ ಇದಕ್ಕೆ ಕಾರಣವಾಗಬಹುದು. ಹಾಗಾದರೆ ಮಲಬದ್ಧತೆಯಿಂದ ಉಂಟಾಗುವ ಸಮಸ್ಯೆಗಳು ಯಾವವು, ಈ ರೀತಿ ಸಮಸ್ಯೆ ಬರದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಲಬದ್ಧತೆಯಿಂದ ಉಂಟಾಗುವ ಸಮಸ್ಯೆಗಳು
ದೀರ್ಘಕಾಲ ಮಲಬದ್ಧತೆ ಇದ್ದರೆ ಮಲವಿಸರ್ಜನೆ ವೇಳೆ ಹೆಚ್ಚು ಒತ್ತಡ ಹಾಕಬೇಕಾಗುತ್ತದೆ. ಇದರಿಂದ ಮೂಲವ್ಯಾಧಿ (ಪೈಲ್ಸ್), ಗುದದ್ವಾರದ ಚರ್ಮದಲ್ಲಿ ಬಿರುಕು (ಅನಲ್ ಫಿಶರ್) ಹಾಗೂ ಕೆಲವರಲ್ಲಿ ರೆಕ್ಟಲ್ ಪ್ರೋಲಾಪ್ಸ್ ಅಪಾಯವೂ ಹೆಚ್ಚಬಹುದು. ಜೊತೆಗೆ ಹೊಟ್ಟೆ ಉಬ್ಬರ, ಗ್ಯಾಸ್, ಹೊಟ್ಟೆನೋವು, ಅಜೀರ್ಣ ಮತ್ತು ಗಟ್ಟಿಯಾದ ಮಲ ಕರುಳಿನಲ್ಲಿ ಸಿಲುಕುವ (ಫೀಕಲ್ ಇಂಪ್ಯಾಕ್ಷನ್) ಸಮಸ್ಯೆಯೂ ಕಾಣಿಸಬಹುದು.
ಇದನ್ನೂ ಓದಿ: ಫುಡ್ ಪಾಯ್ಸನಿಂಗ್ ಆಗದಂತೆ ತಡೆಯಲು ಉಳಿದ ಆಹಾರವನ್ನು ಈ ರೀತಿ ಸಂಗ್ರಹಿಸಿಡಿ!
ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಮಲಬದ್ಧತೆ ಹಲವು ದಿನಗಳವರೆಗೆ ಮುಂದುವರಿದರೆ, ಮಲದಲ್ಲಿ ರಕ್ತ ಕಾಣಿಸಿದರೆ, ತೀವ್ರ ಹೊಟ್ಟೆನೋವು, ಹೊಟ್ಟೆ ಉಬ್ಬರ, ಕಾರಣವಿಲ್ಲದೆ ತೂಕ ಇಳಿಕೆ, ವಾಂತಿ, ಮಲವಿಸರ್ಜನೆ ಸರಿಯಾಗಿ ಆಗದಿರುವುದು, ಜ್ವರ ಅಥವಾ ತೀವ್ರ ದೌರ್ಬಲ್ಯ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇವು ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು.
ತಡೆಗಟ್ಟಲು ಏನು ಮಾಡಬೇಕು?
ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಹಣ್ಣು, ಹಸಿರು ತರಕಾರಿಗಳು, ಸಂಪೂರ್ಣ ಧಾನ್ಯಗಳು ಹಾಗೂ ಬೇಳೆಕಾಳುಗಳಂತಹ ಫೈಬರ್‌ಯುಕ್ತ ಆಹಾರ ಸೇವಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಮಲವಿಸರ್ಜನೆಗೆ ಹೋಗಬೇಕು ಎಂದು ಅನಿಸಿದಾಗ ತಡೆಹಿಡಿಯಬೇಡಿ. ಜಂಕ್ ಫುಡ್ ಹಾಗೂ ಅತಿ ಸಂಸ್ಕರಿತ ಆಹಾರವನ್ನು ಕಡಿಮೆ ಮಾಡಿ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿದರೂ ಮಲಬದ್ಧತೆ ಕಡಿಮೆಯಾಗದಿದ್ದರೆ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
