Headlines

ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು – Kannada News | Drought Crisis: Shepherds Struggle for Fodder, Water; Sheep Farming at Risk

ಬೀದರ್, ಜೂನ್​​ 26: ಮಳೆಗಾಲ (Rain) ಆರಂಭವಾಗಿ ವಾರಗಳೇ ಕಳೆದರೂ ಜಿಲ್ಲೆಯಲ್ಲಿ ಮಾತ್ರ ಸಮರ್ಪಕ ಮಳೆಯಾಗಿಲ್ಲ. ಪರಿಣಾಮ ರೈತರು ಮಾತ್ರವಲ್ಲ, ಕುರಿ-ಮೇಕೆಗಳನ್ನು ಸಾಕುವ ಕುರಿಗಾಹಿಗಳ ಬದುಕೂ ಸಂಕಷ್ಟಕ್ಕೆ ಸಿಲುಕಿದೆ. ಕಾಡು ಮತ್ತು ಬಯಲು ಪ್ರದೇಶಗಳಲ್ಲಿ ಹಸಿರು ಸಂಪೂರ್ಣ ಮಾಯವಾಗಿದ್ದು, ಕುರಿಗಳಿಗೆ ಮೇವು ಮತ್ತು ಕುಡಿಯುವ ನೀರು ಸಿಗದೇ ಕುರಿಗಾಹಿಗಳು (Sheep Farming) ಹತ್ತಾರು ಕಿ.ಮೀ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೈಕೊಟ್ಟ ಮುಂಗಾರು: ಮೇವು ಸಿಗದೆ ಕುರಿಗಾಹಿಗಳು ಕಂಗಾಲು

ಬೀದರ್ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಮಳೆ ಬಾರದ ಕಾರಣ ಬಯಲು ಪ್ರದೇಶಗಳು ಸಂಪೂರ್ಣ ಒಣಗಿದ್ದು, ಕಾಡಿನಲ್ಲೂ ಹಸಿರು ಮಾಯವಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರದೇಶಗಳು ಈಗ ಬರಿದಾಗಿವೆ. ಹೀಗಾಗಿ ಕುರಿ-ಮೇಕೆಗಳಿಗೆ ಮೇವು ಸಿಗದೆ ಕುರಿಗಾಹಿಗಳು ಪ್ರತಿದಿನ ಹೊಸ ಪ್ರದೇಶಗಳ ಹುಡುಕಾಟದಲ್ಲಿ ಅಲೆದಾಡುತ್ತಿದ್ದಾರೆ. ಬೆಳಗ್ಗೆಯಿಂದಲೇ ನೂರಾರು ಕುರಿಗಳನ್ನು ಕರೆದುಕೊಂಡು ಹೊರಡುವ ಕುರಿಗಾಹಿಗಳು ಕಾಡು, ಗುಡ್ಡ ಹಾಗೂ ಬಯಲು ಪ್ರದೇಶಗಳಲ್ಲಿ ಅಲೆದರೂ ಸಮರ್ಪಕ ಮೇವು ಸಿಗುತ್ತಿಲ್ಲ.

ಇದನ್ನೂ ಓದಿ: ಕೈ ಕೊಟ್ಟ ಮುಂಗಾರು: ಬೆಳೆದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು

ಇನ್ನು ಕೆರೆ, ಹಳ್ಳ ಹಾಗೂ ನೀರಿನ ತೊರೆಗಳು ಒಣಗಿರುವುದರಿಂದ ಕುಡಿಯುವ ನೀರಿಗಾಗಿ ಕೂಡ ಸಾಕಷ್ಟು ಪರದಾಡಬೇಕಾಗಿದೆ. ಕೆಲವೆಡೆ ದೂರದ ಗ್ರಾಮಗಳಿಗೆ ತೆರಳಿ ನೀರು ಕುಡಿಸಿ ಮತ್ತೆ ಮೇವು ಹುಡುಕುವ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರು ತಿಂಗಳಿಂದ ಇದೇ ಸಮಸ್ಯೆ ಮುಂದುವರಿದಿದ್ದು, ಕುರಿಗಳಿಗೆ ಸಮರ್ಪಕ ಆಹಾರ ಸಿಗದ ಕಾರಣ ಅವುಗಳ ತೂಕ ಗಣನೀಯವಾಗಿ ಕಡಿಮೆಯಾಗಿದೆ. ಹಸಿವಿನಿಂದ ಬಳಲುತ್ತಿರುವ ಕುರಿಗಳು ದುರ್ಬಲವಾಗುತ್ತಿದ್ದು, ರೋಗಗಳಿಗೆ ತುತ್ತಾಗುವ ಆತಂಕವೂ ಹೆಚ್ಚಾಗಿದೆ. ಇದು ಕುರಿ ಸಾಕಾಣಿಕೆಯನ್ನು ನಂಬಿಕೊಂಡಿರುವ ಕುಟುಂಬಗಳ ಜೀವನೋಪಾಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.

ಹೀಗೆ ಮುಂದುವರಿದರೆ ಕುರಿ ಸಾಕುವುದು ಕಷ್ಟ: ಕುರಿಗಾಹಿ ಮಲ್ಲಪ್ಪ

ಮಳೆ ಬಾರದ ಕಾರಣ ಕಾಡಿನಲ್ಲಿ ಹುಲ್ಲು ಇಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ಅಲೆದರೂ ಕುರಿಗಳಿಗೆ ಮೇವು ಸಿಗುತ್ತಿಲ್ಲ. ಹೀಗೆ ಮುಂದುವರಿದರೆ ಕುರಿಗಳನ್ನು ಸಾಕುವುದು ಕಷ್ಟವಾಗುತ್ತದೆ ಎಂದು ಕುರಿಗಾಹಿ ಮಲ್ಲಪ್ಪ ಅಳಲು ತೋಡಿಕೊಂಡಿದ್ದಾರೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಬೇಸಿಗೆಯಂತೆಯೇ ವಾತಾವರಣ ಮುಂದುವರಿದಿರುವುದರಿಂದ ಮೇವು ಬೆಳೆಯದೇ ಪಶುಸಂಗೋಪನಾ ಕ್ಷೇತ್ರಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಕೆಲ ಸಾಕಾಣಿಕೆದಾರರು ದುಬಾರಿ ದರಕ್ಕೆ ಮೇವು ಖರೀದಿಸುತ್ತಿದ್ದಾರೆ.

ಮಳೆ ವಿಳಂಬವಾದರೆ ಇನ್ನಷ್ಟು ನಷ್ಟ ಸಾಧ್ಯತೆ 

ಸಣ್ಣ ರೈತರು ಮತ್ತು ಬಡ ಕುರಿಗಾಹಿಗಳು ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ. ಕುರಿಗಳ ತೂಕ ಕಡಿಮೆಯಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಕೂಡ ಸಿಗುತ್ತಿಲ್ಲ. ಸಾಕಾಣಿಕೆಗೆ ಮಾಡಿದ ವೆಚ್ಚವೂ ವಾಪಸ್ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಮಳೆ ವಿಳಂಬವಾದರೆ ಇನ್ನಷ್ಟು ನಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ

ಒಂದೆಡೆ ರೈತರು ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ಚಿತ್ತ ನೆಟ್ಟಿದ್ದರೆ, ಮತ್ತೊಂದೆಡೆ ಕುರಿಗಾಹಿಗಳು ತಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ವರುಣ ಕೃಪೆಯಿಂದ ಮಳೆಯಾದರೆ ಮಾತ್ರ ಈ ಸಂಕಷ್ಟದಿಂದ ರೈತರು ಮತ್ತು ಕುರಿಗಾಹಿಗಳು ಹೊರಬರಲು ಸಾಧ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *