ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಕರ್ನಾಟಕದ ಅತ್ಯದ್ಭುತ ಸ್ಥಳಗಳಿವು – Kannada News | Amazing places to visit in Karnataka during the monsoon season

ಮಳೆಗಾಲದ (monsoon) ಸಮಯದಲ್ಲಿ ಪ್ರಕೃತಿಯ ಸೌಂದರ್ಯ ದುಪ್ಪಾಟ್ಟಾಗುತ್ತದೆ. ಧುಮ್ಮಿಕ್ಕುವ ಜಲಧಾರೆಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಗಿರಿಧಾಮಗಳು ಇವೆಲ್ಲವೂ ಮಳೆಗಾಲದ ಸಮಯದಲ್ಲಿ ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಪ್ರಕೃತಿಯ ಇಂತಹ ಅತ್ಯದ್ಭುತ ಸೌಂದರ್ಯವನ್ನು ಸವಿಯಲೆಂದು ಅನೇಕರು ಕೇರಳ, ಮೇಘಾಲಯ ಅಂತ ದೂರದೂರುಗಳಿಗೆ ಪ್ರವಾಸ ಹೋಗ್ತಾರೆ. ನಮ್ಮ ಕರ್ನಾಟಕದಲ್ಲೂ ಭೂಮಿಯ ಮೇಲಿನ ಸ್ವರ್ಗದಂತಿರುವ ಇಂತಹ ಅತ್ಯದ್ಭುತ ಸ್ಥಳಗಳಿದ್ದು, ಈ ಬಾರಿ ಮಾನ್ಸೂನ್‌ ಟ್ರಿಪ್‌ ಏನಾದ್ರೂ ಪ್ಲಾನ್‌ ಮಾಡಿದ್ರೆ ಕೂರ್ಗ್‌, ಚಿಕ್ಕಮಗಳೂರು ಇತ್ಯಾದಿ ಕರ್ನಾಟದಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ. ಎಲ್ಲೆಲ್ಲೂ ಹಚ್ಚಹಸಿರಿನ ವಾತಾವರಣ, ಚಿಟಪಟ ಮಳೆ, ಚುಮುಚುಮು ಚಳಿ ಇವೆಲ್ಲವೂ ಮನಸ್ಸಿಗೆ ಹಿತ ನೀಡಿ ನಿಮ್ಮ ಒತ್ತಡವನ್ನೆಲ್ಲಾ ಹೋಗಲಾಡಿಸುದೆ. ಹಾಗಿದ್ರೆ ಮಳೆಗಾಲದಲ್ಲಿ ಕರ್ನಾಟಕದ ಯಾವೆಲ್ಲಾ ತಾಣಗಳಿಗೆ ಪ್ರವಾಸ ಹೋದ್ರೆ ಬೆಸ್ಟ್‌ ಎನ್ನುವುದನ್ನು ನೋಡೋಣ ಬನ್ನಿ,

ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಕರ್ನಾಟಕದ ಅತ್ಯದ್ಭುತ ತಾಣಗಳು:

ಕೊಡಗು: ಮಳೆಗಾಲದಲ್ಲಿ ಕೂರ್ಗ್‌ನ ಪ್ರಕೃತಿ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಮಂಜಿನಿಂದ ಆವರಿಸಿದ ಕಾಫಿ ತೋಟಗಳು, ಹಾಲಿನ ನೊರೆಯಂತೆ ಧುಮ್ಮಿಕ್ಕಿ ಹರಿಯುವ ಜಲಪಾತ, ತಂಪಾದ ವಾತಾವರಣ ಇವೆಲ್ಲವೂ ಮನಸ್ಸಿಗೆ ಮುದ ನೀಡುತ್ತದೆ. ಈ ಬಾರಿ ಮೂನ್ಸೂನ್‌ ಟ್ರಿಪ್‌ ಹೋಗೋ ಪ್ಲಾನ್‌ ಇದ್ರೆ ಕೂರ್ಗ್‌ಗೆ ಒಮ್ಮೆ ಭೇಟಿ ನೀಡಿ. ಇಲ್ಲಿ ನೀವು ಅಬ್ಬೆ ಜಲಪಾತ, ಇರ್ಪು ಜಲಪಾತ, ರಾಜಾಸೀಟ್, ಕಾಫಿ ತೋಟಗಳು ಇತ್ಯಾದಿ ಸುಂದರ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಸಕಲೇಶಪುರ: ನಮ್ಮ ಕರ್ನಾಟಕದ ಅತ್ಯದ್ಭುತ ಗಿರಿಧಾಮಗಳಲ್ಲಿ ಸಕಲೇಶಪುರ ಕೂಡ ಒಂದು. ಮಳೆಗಾಲದಲ್ಲಿ ಭೇಟಿ ನೀಡಲು ಹೇಳಿ ಮಾಡಿಸಿದಂತಹ ಸ್ಥಳ ಇದಾಗಿದೆ. ಕೋಟೆಗಳು, ಚಹಾ, ಕಾಫಿ ಮತ್ತು ಮಸಾಲೆಗಳ ವಿಶಾಲ ತೋಟ, ಹಚ್ಚಹಸಿರಿನ ವಾತಾವರಣ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುವುದು ನಿಜ. ಇಲ್ಲಿ ನೀವು ಮಂಜರಾಬಾದ್‌, ಬಿಸ್ಲೆ ವ್ಯೂ ಪಾಯಿಂಟ್‌, ಮಂಜೇಹಳ್ಳಿ ಜಲಪಾತ, ಹಡ್ಲು ಜಲಪಾತ, ಬಿಸ್ಲೆ ರಿಸರ್ವ್ ಫಾರೆಸ್ಟ್, ಮಗಜಹಳ್ಳಿ ಜಲಪಾತ, ಬೆಟ್ಟ ಬೈರವೇಶ್ವರ ದೇವಸ್ಥಾನ, ಹಳೆಬೀಡು ಬೇಲೂರು ದೇವಸ್ಥಾನಗಳಿಗೆ ಭೇಟಿ ನೀಡಬಹುದು.

ಚಿಕ್ಕಮಗಳೂರು: ಮುನ್ನಾರ್‌, ವಯನಾಡ್‌ ಅಂತೆಲ್ಲಾ ಬೇರೆ ರಾಜ್ಯಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಬದಲು ನಮ್ಮ ಕರ್ನಾಟಕದಲ್ಲೇ ಇರುವ ಅತೀ ಸುಂದರವಾದ ಪ್ರವಾಸಿ ತಾಣಗಳಿರುವ ಚಿಕ್ಕಮಗಳೂರಿಗೆ ಮಳೆಗಾಲದಲ್ಲಿ ಭೇಟಿ ನೀಡಿ. ಕಾಫಿ ಮತ್ತು ಚಹಾ ತೋಟದ ಸೌಂದರ್ಯದ ಜೊತೆಗೆ ಹಚ್ಚ ಹಸಿರಿನ ಹೊದಿಕೆಯಂತೆ ಕಾಣುವ ಪಶ್ಚಿಮ ಘಟ್ಟಗಳ ಸೌಂದರ್ಯವನ್ನೂ ಸವಿಯಬಹುದು. ಇಲ್ಲಿ ನೀವು ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನಗಿರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ರಾಣಿ ಝರಿ, ಹಿರೇಕೊಳಲೆ ಕೆರೆ, ಸಂಸೆ, ಕಳಸ ಇತ್ಯಾದಿ ಸುಂದರ ತಾಣಗಳಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಮಳೆಗಾಲದಲ್ಲಿ ಸ್ಥಳಗಳಿಗೆ ಪ್ರವಾಸ ಹೋಗೋದನ್ನು ಸಾಧ್ಯವಾದಷ್ಟು ತಪ್ಪಿಸಿ

ಆಗುಂಬೆ: ಪಶ್ಚಿಮ ಘಟ್ಟಗಳಲ್ಲಿ ನೆಲೆಯಾಗಿರುವ ದಕ್ಷಿಣದ ಚಿರಾಪುಂಜಿ ಎಂದೇ ಪ್ರಸಿದ್ಧವಾಗಿರುವ ಆಗುಂಬೆಗೆ ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಅತ್ಯದ್ಭುತ ಸ್ಥಳವಾಗಿದೆ. ಇಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿದ್ದು,  ಸನ್ಸೆಟ್ ವ್ಯೂ ಪಾಯಿಂಟ್, ಕೂಡ್ಲೂ ತೀರ್ಥ ಜಲಪಾತ, ಬರ್ಕಾಣ ಜಲಪಾತ, ಆಗುಂಬೆ ಘಾಟ್‌, ಕವಲೇದುರ್ಗ ಕೋಟೆ, ಕುಂದಾದ್ರಿ ಬೆಟ್ಟ, ಕೊಡಚಾದ್ರಿ ಇತ್ಯಾದಿ ತಾಣಗಳಿಗೆ ಭೇಟಿ ನೀಡಬಹುದು.

ಇದಲ್ಲದೆ ಕೆಮ್ಮಣ್ಣು ಗುಂಡಿ, ಜೋಗ ಜಲಪಾತ, ಶಿವನಸಮುದ್ರ ಮತ್ತು ಭರಚುಕ್ಕಿ ಜಲಪಾತ, ಕಬಿನಿ ಮತ್ತು ನಾಗರಹೊಳೆ, ಹಂಪಿ, ಶ್ರೀರಂಗಪಟ್ಟಣ, ನಂದಿ ಬೆಟ್ಟ, ಸ್ಕಂದಗಿರಿ ಇತ್ಯಾದಿ ಸುಂದರ ತಾಣಗಳಿಗೂ ಭೇಟಿ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *