ಮಳೆಯಲ್ಲಿ ನೆನೆಯುವುದರಿಂದ ಸಿಗುವ ಪ್ರಯೋಜನಗಳುImage Credit source: Getty Images
ಮಳೆಗಾಲ ಕೆಲವರಿಗೆ ಇಷ್ಟವಾಗದಿರಬಹುದು. ಆದರೆ ಈ ಋತು ಆರಂಭವಾಗುತ್ತಿದ್ದಂತೆ ತಂಪಾದ ಗಾಳಿ ಮತ್ತು ಜಿನುಗುವ ಮಳೆ (Rain) ಮನಸ್ಸಿಗೆ ಹೊಸ ಉಲ್ಲಾಸ ನೀಡುವುದರಿಂದ ಮಳೆಯಲ್ಲಿ ನೆನೆಯಲು ಅನೇಕರಿಗೆ ಇಷ್ಟವಾಗುತ್ತದೆ. ಈ ಅನುಭವ ಎಲ್ಲಾ ಸಮಯದಲ್ಲಿಯೂ ಸಿಗದಿರುವುದರಿಂದ ಇದನ್ನು ಸಿಕ್ಕಾಗ ಆನಂದಿಸುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಆದರೆ ಕೆಲವರಿಗೆ ಮಳೆಯಲ್ಲಿ ನೆನೆದರೆ ಆರೋಗ್ಯ ಹಾಳಾಗುತ್ತದೆ ಎಂಬ ಭಯವಿರುತ್ತದೆ. ಆರೋಗ್ಯ ತಜ್ಞರು ಆರೋಗ್ಯವಂತ ವ್ಯಕ್ತಿ ಅಲ್ಪ ಸಮಯ ಮಳೆಯಲ್ಲಿ ನೆನೆಯುವುದರಿಂದ ದೊಡ್ಡ ತೊಂದರೆ ಆಗುವುದಿಲ್ಲ. ಆದರೆ ದೀರ್ಘ ಸಮಯ ನೆನೆಯುವುದು ಅಥವಾ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಸೋಂಕುಗಳ ಅಪಾಯ ಹೆಚ್ಚಾಗಬಹುದು ಎನ್ನುತ್ತಾರೆ.
ಮಳೆಯಲ್ಲಿ ಕೆಲ ನಿಮಿಷ ನೆನೆಯುವುದರಿಂದ ಒತ್ತಡ ಕಡಿಮೆಯಾಗಬಹುದು. ಪ್ರಕೃತಿಯೊಂದಿಗೆ ಸಮಯ ಕಳೆಯುವುದರಿಂದ ದೇಹದಲ್ಲಿ ‘ಎಂಡೋರ್ಫಿನ್’ ಮತ್ತು ‘ಸೆರೋಟೊನಿನ್’ ಹಾರ್ಮೋನ್ಗಳ ಚಟುವಟಿಕೆ ಹೆಚ್ಚಾಗಿ ಮನಸ್ಸು ಹಗುರವಾಗಿರುವ ಅನುಭವ ನೀಡಬಹುದು. ಬಿಸಿಲಿನ ವಾತಾವರಣದ ಬಳಿಕ ಮಳೆಯ ತಂಪು ದೇಹಕ್ಕೆ ನೆಮ್ಮದಿಯನ್ನೂ ನೀಡುತ್ತದೆ.
ಇದನ್ನೂ ಓದಿ: ಒಂದು ಮುಷ್ಠಿ ಅಕ್ರೋಟ್ನಿಂದ ದಿನ ಆರಂಭಿಸಿ; ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ನೋಡಿ
ಮೊದಲ ಮಳೆಯಲ್ಲಿ ನೆನೆಯುವಾಗ ಈ ವಿಷಯ ತಿಳಿದಿರಬೇಕು;
ಆದರೆ ಮೊದಲ ಮಳೆಯಲ್ಲಿ ನೆನೆಯುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ಆರಂಭಿಕ ಮಳೆಯ ನೀರಿನಲ್ಲಿ ವಾಯುಮಾಲಿನ್ಯದ ಕಣಗಳು, ಧೂಳು ಮತ್ತು ಕೆಲವು ರಾಸಾಯನಿಕಗಳು ಬೆರೆತಿರುವ ಸಾಧ್ಯತೆ ಇರುತ್ತದೆ. ಹೆಚ್ಚು ಸಮಯ ಒದ್ದೆಯಾದ ಬಟ್ಟೆಯಲ್ಲೇ ಇರುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗಿ ಜ್ವರ, ಶೀತ ಅಥವಾ ಚರ್ಮದ ಸೋಂಕಿನ ಅಪಾಯ ಹೆಚ್ಚಾಗಬಹುದು. ಕಾಲಿನಲ್ಲಿ ಹೆಚ್ಚು ಹೊತ್ತು ಒದ್ದೆ ಬಟ್ಟೆಯಲ್ಲಿದ್ದರೆ ಫಂಗಲ್ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಮಳೆಯಲ್ಲಿ ನೆನೆದ ಬಳಿಕ ತಕ್ಷಣ ಒಣ ಬಟ್ಟೆ ಧರಿಸಿ, ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ಬಿಸಿ ಸೂಪ್, ಕಷಾಯ ಅಥವಾ ನೀರು ಕುಡಿಯುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರಲು ಸಹಕಾರಿಯಾಗುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ಮಳೆಯಲ್ಲಿ ನೆನೆಯುವುದರಿಂದ ವಿಟಮಿನ್ ಬಿ12 ಅಥವಾ ಇತರ ವಿಶೇಷ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಹಾಗೆಯೇ ಮಳೆಯಲ್ಲಿ ನೆನೆಯುವುದರಿಂದಲೇ ಜ್ವರ ಬರುತ್ತದೆ ಎನ್ನುವುದೂ ಕೂಡ ಸರಿಯಲ್ಲ. ಆದರೆ ತೇವಾಂಶ, ಚಳಿ ಮತ್ತು ವೈರಸ್ಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚಾಗುವುದರಿಂದ ಅನಾರೋಗ್ಯದ ಅಪಾಯ ಹೆಚ್ಚಬಹುದು. ಆದ್ದರಿಂದ ಮಳೆಯ ಸೌಂದರ್ಯವನ್ನು ಆನಂದಿಸುವ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
