ನಾಗ್ಪುರ, ಜೂನ್ 26: ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ಮಹಾರಾಷ್ಟ್ರ ರಾಜಕೀಯದಲ್ಲಿ ಇಂದು ಒಂದು ಅಪರೂಪದ ಹಾಗೂ ಅಚ್ಚರಿಯ ಬೆಳವಣಿಗೆ ನಡೆದಿದೆ. ಸದಾ ಪರಸ್ಪರ ಟೀಕೆ ಮಾಡಿಕೊಳ್ಳುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿವಸೇನಾ (ಯುಬಿಟಿ) ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಮುಂಬೈನಿಂದ ನಾಗ್ಪುರಕ್ಕೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಅಷ್ಟೇ ಅಲ್ಲದೆ, ವಿಮಾನದಲ್ಲಿ ಮುಖಾಮುಖಿಯಾದಾಗ ಇಬ್ಬರೂ ನಾಯಕರು ಪರಸ್ಪರ ಕೈ ಕುಲುಕಿ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.
ರಾಜಕೀಯ ಕಾರ್ಯಕ್ರಮಗಳ ಕಾರಣಕ್ಕೆ ಉಭಯ ನಾಯಕರು ಮುಂಬೈನಿಂದ ನಾಗ್ಪುರಕ್ಕೆ ತೆರಳುತ್ತಿದ್ದರು. ಕಾಕತಾಳೀಯ ಎಂಬಂತೆ ಇಬ್ಬರಿಗೂ ಒಂದೇ ಕಮರ್ಷಿಯಲ್ ವಿಮಾನದಲ್ಲಿ ಸೀಟು ಕಾಯ್ದಿರಿಸಲಾಗಿತ್ತು. ವಿಮಾನದ ಒಳಗಡೆ ಇಬ್ಬರು ನಾಯಕರು ಎದುರಾದಾಗ, ಹಳೆಯ ರಾಜಕೀಯ ಕಹಿ ನೆನಪುಗಳನ್ನು ಬದಿಗಿಟ್ಟು ಅತ್ಯಂತ ಸೌಜನ್ಯದಿಂದ ಕೈಕುಲುಕಿದ್ದಾರೆ.
Really wondering what are they talking about ? They all took off today eveing for Nagpur from Mumbai in the same flight. Though they are going for totally different purposes. #DevendraFadnavis #UddhavThackrey pic.twitter.com/ZasQ3ZSFgE
— Megha Prasad (@MeghaSPrasad) June 26, 2026
ಇದೇ ವಿಮಾನದಲ್ಲಿ ಉದ್ಧವ್ ಠಾಕ್ರೆ ಅವರ ಆಪ್ತ ಹಾಗೂ ಸಂಸದ ಸಂಜಯ್ ರಾವತ್ ಮತ್ತು ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಕೂಡ ಪ್ರಯಾಣಿಸುತ್ತಿದ್ದರು. ಉದ್ಧವ್ ಠಾಕ್ರೆ ಮತ್ತು ದೇವೇಂದ್ರ ಫಡ್ನವಿಸ್ ಇಬ್ಬರೂ ಇದನ್ನು ಕೇವಲ ಕಾಕತಾಳೀಯ ಭೇಟಿ ಎಂದಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪೂರ್ವ ನಿಗದಿತ ಸರ್ಕಾರಿ ಮತ್ತು ರಾಜಕೀಯ ಕಾರ್ಯಕ್ರಮಗಳ ಭಾಗವಾಗಿ ತಮ್ಮ ತವರು ರಾಜ್ಯ ಮತ್ತು ವಿಧಾನಸಭಾ ಕ್ಷೇತ್ರವಾದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದರು. ಉದ್ಧವ್ ಠಾಕ್ರೆ ಶನಿವಾರದಿಂದ ಮೂರು ದಿನಗಳ ವಿದರ್ಭ ಮತ್ತು ಮರಾಠವಾಡ ಪ್ರವಾಸಕ್ಕಾಗಿ ನಾಗ್ಪುರಕ್ಕೆ ಆಗಮಿಸಿದ್ದರು.
ಇದನ್ನೂ ಓದಿ: ಠಾಕ್ರೆಗೆ ಶಾಕ್; ಶಿವಸೇನೆಯ 6 ಬಂಡಾಯ ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆ
ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ:
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮುರಿದುಬಿದ್ದಿತ್ತು. ಅದಾದ ನಂತರ ಉದ್ಧವ್ ಠಾಕ್ರೆ ಕಾಂಗ್ರೆಸ್-ಎನ್‌ಸಿಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು. ತದನಂತರ ಏಕನಾಥ್ ಶಿಂಧೆ ಬಂಡಾಯ ಎದ್ದು ಬಿಜೆಪಿಯೊಂದಿಗೆ ಸರ್ಕಾರ ರಚಿಸಿದಾಗಿನಿಂದ ಫಡ್ನವಿಸ್ ಮತ್ತು ಠಾಕ್ರೆ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿತ್ತು. ಸಾರ್ವಜನಿಕ ವೇದಿಕೆಗಳಲ್ಲಿ ಒಬ್ಬರನ್ನೊಬ್ಬರು ಕಠಿಣ ಪದಗಳಿಂದ ಟೀಕಿಸುತ್ತಿದ್ದ ಇಬ್ಬರು ನಾಯಕರು ಈಗ ಹಸ್ತಲಾಘವ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಈಗ ಉಳಿದಿರುವುದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ; ಉದ್ಧವ್ ಠಾಕ್ರೆಗೆ ಅಮಿತ್ ಶಾ ಟಾಂಗ್
“ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಯಲ್ಲಿ ವೈಯಕ್ತಿಕ ದ್ವೇಷಕ್ಕೆ ಜಾಗವಿಲ್ಲ. ನಾವು ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿದ್ದರೂ, ಸಾರ್ವಜನಿಕವಾಗಿ ಎದುರಾದಾಗ ಕನಿಷ್ಠ ಸೌಜನ್ಯ ಪ್ರದರ್ಶಿಸುವುದು ನಮ್ಮ ಸಂಪ್ರದಾಯ” ಎಂದು ಉಭಯ ಪಕ್ಷಗಳ ನಾಯಕರು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
