ಮಹೇಶ್ ಬಾಬು ಕಾಲೇಜು ಐಡಿ ಕಾರ್ಡ್​ ಹಿಂದಿನ ಅಸಲಿಯತ್ತೇನು?

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತು. ವಯಸ್ಸಾಗುತ್ತಿದ್ದರೂ ಮತ್ತಷ್ಟು ಹ್ಯಾಂಡ್‌ಸಮ್ ಆಗಿ ಕಾಣುವ ಮಹೇಶ್, ಪ್ರಸ್ತುತ ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷಿತ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಹಾಗೂ ಮಲಯಾಳಂ ಸೂಪರ್‌ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಭರದಿಂದ ಚಿತ್ರೀಕರಣ ನಡೆಯುತ್ತಿರುವ ಈ ಸಿನಿಮಾ ಮುಂದಿನ ವರ್ಷದ ಬೇಸಿಗೆಯಲ್ಲಿ ತೆರೆಗೆ ಬರಲಿದೆ. ಈ ನಡುವೆ ಮಹೇಶ್ ಬಾಬು ಅವರ ಕಾಲೇಜು ದಿನಗಳ ಅಪರೂಪದ ಐಡಿ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮಹೇಶ್ ಬಾಬು ಅವರು ಚೆನ್ನೈನ ಪ್ರಸಿದ್ಧ ‘ಲೊಯೊಲಾ ಕಾಲೇಜಿನಲ್ಲಿ’ ಬಿ.ಕಾಂ ಪದವಿ ವ್ಯಾಸಂಗ ಮಾಡಿದ್ದರು ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದ ಐಡಿ ಕಾರ್ಡ್ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರ ಪೂರ್ಣ ಹೆಸರು ಘಟ್ಟಮನೇನಿ ಮಹೇಶ್ ಬಾಬು ಎಂದು ಬರೆಯಲಾಗಿದೆ. ಅಲ್ಲದೆ ಐಡಿ ಸಂಖ್ಯೆ LCC/1997/4321, ರೋಲ್ ಸಂಖ್ಯೆ 97-1186 ಹಾಗೂ ಅವರು 1997 ರಿಂದ 2000 ರ ಬ್ಯಾಚ್‌ನಲ್ಲಿ ಓದುತ್ತಿದ್ದರು ಎಂಬ ಮಾಹಿತಿ ಕಾರ್ಡ್‌ನಲ್ಲಿದೆ. ಜುಲೈ 15, 1997 ರಂದು ವಿತರಿಸಲಾದ ಈ ಕಾರ್ಡ್ ಮೇ 2000 ರವರೆಗೆ ಮಾನ್ಯತೆ ಹೊಂದಿತ್ತು ಎಂದು ತೋರಿಸಲಾಗಿದೆ.

ಈ ಐಡಿ ಕಾರ್ಡ್‌ನಲ್ಲಿ ಮಹೇಶ್ ಬಾಬು ಅವರ ಜನ್ಮ ದಿನಾಂಕ 09-08-1975 ಮತ್ತು ರಕ್ತದ ಗುಂಪು ‘O +ve’ ಎಂದು ನಮೂದಿಸಲಾಗಿದೆ. ವಿಶೇಷವೆಂದರೆ, ಇದರಲ್ಲಿ ಅವರ ಮನೆಯ ವಿಳಾಸದ ಜಾಗದಲ್ಲಿ ಹೈದರಾಬಾದ್‌ನ ‘ಪದ್ಮಾಲಯ ಸ್ಟುಡಿಯೋಸ್, ರಸ್ತೆ ಸಂಖ್ಯೆ 12, ಬಂಜಾರ ಹಿಲ್ಸ್’ ಎಂದು ಮುದ್ರಿಸಲಾಗಿದೆ. ಅಂದಿನ ಪ್ರಾಂಶುಪಾಲರಾದ ಡಾ. ಎಫ್. ಆಂಡ್ರ್ಯೂ ಅವರ ಸಹಿಯೊಂದಿಗೆ ಮಹೇಶ್ ಬಾಬು ಅವರ ಸಹಿ ಮತ್ತು ಅವರ ಹಳೆಯ ಭಾವಚಿತ್ರವೂ ಈ ಗುರುತಿನ ಚೀಟಿಯಲ್ಲಿ ಕಂಡುಬಂದಿದೆ.

ಇದನ್ನೂ ಓದಿ:  ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ಆದರೆ ಈ ವೈರಲ್ ಐಡಿ ಕಾರ್ಡ್ ಬಗ್ಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲೂ ಮಹೇಶ್ ಬಾಬು ತುಂಬಾ ಕ್ಯೂಟ್ ಆಗಿದ್ದರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಹಲವರು ಇದು ಅಸಲಿ ಕಾರ್ಡ್ ಅಲ್ಲ, ಬದಲಿಗೆ ಎಐ ಇಂದ ಮಾಡಿರುವ ನಕಲಿ ಕಾರ್ಡ್ ಎಂದು ವಾದಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇದು ನಕಲಿ ಐಡಿ ಕಾರ್ಡ್ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಇದೇ ಮಾದರಿಯ ವಿನ್ಯಾಸವನ್ನು ಹೊಂದಿರುವ ಬೇರೆ ಬೇರೆ ಸ್ಟಾರ್ ನಟರ ಕಾಲೇಜು ಐಡಿ ಕಾರ್ಡ್‌ಗಳು ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *