ನರ್ಮದಾ,ಏಪ್ರಿಲ್ 28: ವ್ಯಕ್ತಿಯೊಬ್ಬ ಮಾಟಮಂತ್ರದ ಶಂಕೆಯಿಂದ ಸಹೋದರನನ್ನು ಕೊಲೆ(Murder) ಮಾಡಿ ಅವರ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಕೇವಲ ಮಾಟಮಂತ್ರದ ಅನುಮಾನದಿಂದ ಅಣ್ಣನೊಬ್ಬ ತನ್ನ ತಮ್ಮನ ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಆರೋಪಿ ರಮೇಶ್ ವಾಸವ ಮತ್ತು ಆತನ ಕಿರಿಯ ಸಹೋದರ ಗುರ್ಜಿ ವಾಸವ ನಡುವೆ ದೀರ್ಘಕಾಲದಿಂದ ಮನಸ್ತಾಪವಿತ್ತು. ಗುರ್ಜಿ ತನ್ನ ಮೇಲೆ ಮಾಟಮಂತ್ರ ಮಾಡುತ್ತಿದ್ದಾನೆ ಎಂದು ರಮೇಶ್ ಬಲವಾಗಿ ನಂಬಿದ್ದ. ಸೋಮವಾರ ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಕೋಪೋದ್ರಿಕ್ತನಾದ ರಮೇಶ್, ಗುರ್ಜಿ ಅಂಗಡಿಯಿಂದ ಹಿಂತಿರುಗುತ್ತಿದ್ದಾಗ ಹರಿತವಾದ ಆಯುಧದಿಂದ ಹೊಂಚು ಹಾಕಿ ದಾಳಿ ನಡೆಸಿದ್ದಾನೆ. ಅತಿ ಕ್ರೂರವಾಗಿ ಗುರ್ಜಿಯ ಗಂಟಲು ಸೀಳಿ ಕೊಲೆ ಮಾಡಿದ್ದಾನೆ.
ಗುರ್ಜಿ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಅವರ ಪುತ್ರಿಯರಾದ ಸಾವಿತ್ರಿ ಮತ್ತು ಶಿಲ್ಪಾ ತಂದೆಯನ್ನು ರಕ್ಷಿಸಲು ಓಡಿಬಂದರು. ಆದರೆ ಪೈಶಾಚಿಕ ಪ್ರವೃತ್ತಿಯ ರಮೇಶ್ ತನ್ನ ಸೊಸೆಯಂದಿರನ್ನು ಬಿಡಲಿಲ್ಲ. ಸಾವಿತ್ರಿಯ ತಲೆಗೆ ಮತ್ತು ಶಿಲ್ಪಾ ಅವರ ಕೈಗಳಿಗೆ ಗಂಭೀರ ಗಾಯಗಳನ್ನು ಉಂಟುಮಾಡಿದ್ದಾನೆ. ಸದ್ಯ ಇಬ್ಬರು ಯುವತಿಯರು ರಾಜ್‌ಪಿಪ್ಲಾ ಸಿವಿಲ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮತ್ತಷ್ಟು ಓದಿ: ಸಿನಿಮಾ ಸ್ಟೈಲ್ ಕೊಲೆ ಕೇಸ್ ಭೇದಿಸಿದ ಖಾಕಿ: ಆಸ್ತಿ ವಿವಾದಕ್ಕೆ ನಡೆದಿದ್ದು ಡೆಡ್ಲಿ ಮರ್ಡರ್!
ಪೊಲೀಸ್ ತನಿಖೆಯ ವೇಳೆ ಬಯಲಾದ ಮಾಹಿತಿ ಅಧಿಕಾರಿಗಳನ್ನೇ ದಂಗಾಗಿಸಿದೆ. ರಮೇಶ್ ಮೊದಲ ಬಾರಿಗೆ ಈ ಕೃತ್ಯ ಎಸಗಿರಲಿಲ್ಲ. ಸರಿಯಾಗಿ ಎರಡು ದಶಕಗಳ ಹಿಂದೆ, ಅಂದರೆ 2005ರಲ್ಲಿ ಇದೇ ರಮೇಶ್ ಕುಡಿದ ಮತ್ತಿನಲ್ಲಿ ತನ್ನ ಮತ್ತೊಬ್ಬ ಸಹೋದರ ವಿಠ್ಠಲ್ ವಾಸವನನ್ನು ಕೊಂದಿದ್ದ, ಅಂದು ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ ಈತ, ಈಗ ಮತ್ತೊಬ್ಬ ಸಹೋದರನನ್ನು ಬಲಿಪಡೆದಿದ್ದಾನೆ.
ಘಟನೆ ನಡೆದ ತಕ್ಷಣ ಸೊಸೆ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ರಮೇಶ್ ವಾಸವನನ್ನು ಬಂಧಿಸಿದ್ದಾರೆ. ಆರೋಪಿಯು ಮೊದಲಿನಿಂದಲೂ ಹಿಂಸಾತ್ಮಕ ಪ್ರವೃತ್ತಿ ಹೊಂದಿದ್ದಾನೆ. ಕುಟುಂಬದ ಆಂತರಿಕ ಕಲಹ ಮತ್ತು ಮಾಟಮಂತ್ರದ ಸಂಶಯವೇ ಈ ಭೀಕರ ಹತ್ಯೆಗೆ ಮೂಲ ಕಾರಣ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 11:54 am, Tue, 28 April 26
