ಮಾದಕವಸ್ತು ಮುಕ್ತ ಮೈಸೂರು: 3 ಕಡೆ ದೊಡ್ಡ​​ ಕಾರ್ಯಾಚರಣೆ ನಡೆಸಿದ ಪೊಲೀಸರು, 5 ಜನರ ಬಂಧನ – Kannada News | Anti Drug Drive in Mysore: CCB Nabs 5 in Major Raids, Launches ‘Vimukthi’ Hotline

ಡ್ರಗ್ಸ್​​​ ಕಾರ್ಯಚರಣೆಯಲ್ಲಿ ಬಂಧನವಾದ ಆರೋಪಿಗಳು

ಮೈಸೂರು, ಫೆ.12: ಮೈಸೂರು ನಗರದಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಸಿಸಿಬಿ (CCB) ಮತ್ತು ಮಂಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾದಕವಸ್ತು ಮುಕ್ತ ಮೈಸೂರಿಗಾಗಿ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ಮೊಹಮ್ಮದ್ ಕರೀಂ ಮತ್ತು ನಿಷಾದ್ ಪಾಷಾ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಕರೀಂ ಮೇಲೆ ಈಗಾಗಲೇ 5 ಎನ್‌ಡಿಪಿಎಸ್ (NDPS) ಪ್ರಕರಣಗಳು ಹಾಗೂ ನಿಷಾದ್ ಪಾಷಾ ಮೇಲೆ 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವರಿಂದ 3.14 ಗ್ರಾಂ ಎಂಡಿಎಂಎ (MDMA) ಸಿಂಥೆಟಿಕ್ ಡ್ರಗ್ಸ್​​​ಗಳನ್ನು ವಶಪಡಿಸಿಲಾಗಿದೆ. ಇನ್ನು ಮಹಾರಾಷ್ಟ್ರದ ಮಾದಕವಸ್ತು ನಿಯಂತ್ರಣಾ ತಂಡಗಳು ಅಥವಾ ಪೊಲೀಸರು ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪತ್ತೆ ಹಚ್ಚಿದ ನಂತರ ರಾಜ್ಯದಲ್ಲಿ ಹಲವು ಕಡೆ ಪೋಲಿಸರು ಡ್ರಗ್ಸ್​​​ ಕಾರ್ಯಚರಣೆ ನಡೆಸಿದ್ದರು.

ಇನ್ನು ಎರಡನೇ ಪ್ರಕರಣದಲ್ಲಿ ಸಂಜಯ್ ಮತ್ತು ರಾಜ್‌ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ಒಟ್ಟು 585 ಗ್ರಾಂ ಗಾಂಜಾ ವಶ ಮಾಡಲಾಗಿದೆ. ಇದರ ಜತೆಗೆ ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಟಿವಿಎಸ್ (TVS) ಬೈಕ್ ವಶಕ್ಕೆ ಪಡೆಯಲಾಗಿದೆ. ಮೂರನೇ ಪ್ರಕರಣದಲ್ಲಿ ಮೊಹಮ್ಮದ್ ಅಫಾಕ್ ಎಂಬುವವನ್ನು ಬಂಧಿಸಲಾಗಿದೆ. ಈತ ರಾಜೀವ್ ನಗರದ ನಿವಾಸಿಯಾಗಿದ್ದು, ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಮೈಸೂರು ಪೊಲೀಸರು ಡ್ರಗ್ಸ್ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ‘ವಿಮುಕ್ತಿ’ ಹೆಸರಿನಲ್ಲಿ ವಿಶೇಷ ಸಹಾಯವಾಣಿಯನ್ನು (8277948080) ಆರಂಭಿಸಿದ್ದಾರೆ.

ಇದನ್ನೂ ಓದಿ: ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಮೈಸೂರು ಪೊಲೀಸರು

ನಿಮ್ಮ ಸುತ್ತಮುತ್ತ ಡ್ರಗ್ಸ್ ಮಾರಾಟ, ಸೇವನೆ ಅಥವಾ ಸಾಗಾಟದ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಲು ಪೊಲೀಸರು ಕೋರಿದ್ದಾರೆ. ಮಾಹಿತಿ ನೀಡುವವರ ವಿವರಗಳನ್ನು ರಹಸ್ಯವಾಗಿಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೈಸೂರು ನಗರದಾದ್ಯಂತ ಡ್ರಗ್ಸ್ ಪೆಡ್ಲರ್‌ಗಳ ಮೇಲೆ ಪೊಲೀಸರು ತೀವ್ರ ಕಣ್ಗಾವಲು ಇರಿಸಿದ್ದಾರೆ. ಕಾಲೇಜುಗಳು ಮತ್ತು ಹಾಸ್ಟೆಲ್‌ಗಳ ಸುತ್ತಮುತ್ತ ಗಸ್ತನ್ನು ಹೆಚ್ಚಿಸಲಾಗಿದ್ದು, ಡ್ರಗ್ಸ್ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಡ್ರಗ್ಸ್​ ಕಾರ್ಯಚರಣೆ:

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಳೆದ 24 ಗಂಟೆಗಳಲ್ಲಿ ನಡೆಸಿದ ದಾಳಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆಫ್ರಿಕನ್ ಮೂಲದ ಪ್ರಜೆಗಳನ್ನು ಬಂಧಿಸಲಾಗಿದೆ. ಡಾರ್ಕ್ ವೆಬ್ (Dark Web) ಮೂಲಕ ಡ್ರಗ್ಸ್ ತರಿಸಿಕೊಂಡು, ಕೊರಿಯರ್ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಲಾಗಿದೆ. ಮೈಸೂರು ಪೊಲೀಸರು ಕೇವಲ ದಾಳಿ ಮಾಡುವುದಲ್ಲದೆ, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ‘ವಿಮುಕ್ತಿ’ ಎಂಬ ಅಭಿಯಾನ ಆರಂಭಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರುತ್ತಿದ್ದ ಜಾಲಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ಪೊಲೀಸರು ಖಾಸಗಿ ಹಾಸ್ಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದರು. ಇನ್ನು ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಸಾಗಣೆಯಾಗುತ್ತಿದ್ದ ಮಾದಕ ದ್ರವ್ಯಗಳನ್ನು ಗಡಿಯಲ್ಲಿಯೇ ಜಪ್ತಿ ಮಾಡಲಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *