ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ ಕಾನೂನುಬಾಹಿರ; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಯೋಗ ಹೇಳಿದ್ದೇನು? – Kannada News

ನವದೆಹಲಿ, ಜೂನ್ 10: ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಗೆ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರ ರದ್ದತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಂದು ಕಾಂಗ್ರೆಸ್‌ನ ಉನ್ನತ ಮಟ್ಟದ ನಿಯೋಗವು ಕೇಂದ್ರ ಚುನಾವಣಾ ಆಯೋಗವನ್ನು ಭೇಟಿಯಾಗಿದೆ. “ಚುನಾವಣಾಧಿಕಾರಿಯ ಕ್ರಮ ಕಾನೂನುಬಾಹಿರವಾಗಿದ್ದು, ಮೀನಾಕ್ಷಿ ವಿರುದ್ಧ ಯಾವುದೇ ಕೇಸ್ ಇಲ್ಲ” ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಈ ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಲು ಕೂಡ ಕಾಂಗ್ರೆಸ್ ನಿರ್ಧಾರ ಮಾಡಿದೆ. ಚುನಾವಣಾ ಆಯೋಗವನ್ನು ಭೇಟಿಯಾದ ನಿಯೋಗದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಅಭಿಷೇಕ್ ಮನು ಸಿಂಘ್ವಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಜೈರಾಮ್ ರಮೇಶ್, ದೀಪಾ ದಾಸ್ಮುನ್ಷಿ, ವಿವೇಕ್ ತಂಖಾ ಮತ್ತು ಖುದ್ದು ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಉಪಸ್ಥಿತರಿದ್ದರು.

“ಕಾನೂನಿನ ದೃಷ್ಟಿಯಲ್ಲಿ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ” ಎಂದು ಖ್ಯಾತ ಕಾನೂನು ತಜ್ಞ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. “ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಸುಳ್ಳು ಕಾರಣ ನೀಡಿ ರದ್ದುಗೊಳಿಸಲಾಗಿದೆ. ಅವರ ವಿರುದ್ಧ 10 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂಬುದನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಕಾನೂನಿನ ದೃಷ್ಟಿಯಲ್ಲಿ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ! ಅವರ ವಿರುದ್ಧ ಯಾರೋ ಖಾಸಗಿಯಾಗಿ ನೀಡಿರುವ ದೂರಿನ ಆಧಾರದ ಮೇಲೆ, ‘ಈ ದೂರನ್ನು ನ್ಯಾಯಾಲಯವು ಏಕೆ ಪರಿಗಣಿಸಬಾರದು?’ ಎಂದು ಕೇಳಿ ಕೋರ್ಟ್ ಕೇವಲ ಪ್ರಾಥಮಿಕ ನೋಟಿಸ್ ನೀಡಿದೆಯಷ್ಟೆ” ಎಂದು ಅಭಿಷೇಕ್ ಮನು ಸಿಂಘ್ವಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಭಾರೀ ಮುಖಭಂಗ; ರಾಜ್ಯಸಭೆ ಚುನಾವಣೆಗೆ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ

“ಯಾವುದಾದರೂ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಾಗಿದ್ದರೆ ಅಥವಾ ನ್ಯಾಯಾಲಯದಲ್ಲಿ ಅಧಿಕೃತವಾಗಿ ದೋಷಾರೋಪಣೆ ಸಿದ್ಧವಾಗಿದ್ದರೆ ಮಾತ್ರ ಅದನ್ನು ನಾಮಪತ್ರದ ಅಫಿಡವಿಟ್‌ನಲ್ಲಿ ನಮೂದಿಸಬೇಕು ಎಂದು ಆಯೋಗದ ನಿಯಮ ಹೇಳುತ್ತದೆ. ಮ್ಯಾಜಿಸ್ಟ್ರೇಟ್ ಅಥವಾ ಸಂಬಂಧಪಟ್ಟ ನ್ಯಾಯಾಧೀಶರು ಪ್ರಕರಣದ ಅರಿವು ತೆಗೆದುಕೊಳ್ಳುವವರೆಗೂ ಕ್ರಿಮಿನಲ್ ಪ್ರಕರಣ ಅಸ್ತಿತ್ವಕ್ಕೆ ಬರುವುದಿಲ್ಲ.” ಎಂದು ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

“ಚುನಾವಣಾಧಿಕಾರಿಯ ಆದೇಶವು ಕಾನೂನುಬದ್ಧವಾಗಿ ದೋಷಪೂರಿತವಾಗಿದೆ. ಕೇವಲ ನೋಟಿಸ್ ಬಂದಿರುವುದನ್ನು ಬಾಕಿ ಇರುವ ಕೇಸ್ ಎಂದು ಅವರು ತಪ್ಪಾಗಿ ಭಾವಿಸಿದ್ದಾರೆ. ಈ ಪ್ರಕರಣವು ಇನ್ನೂ ಅತ್ಯಂತ ಆರಂಭಿಕ ಹಂತದಲ್ಲಿದೆ ಎಂಬುದು ಕಾನೂನು ಓದುವ ಮೊದಲ ವರ್ಷದ ವಿದ್ಯಾರ್ಥಿಗೂ ತಿಳಿದಿರುವ ಸರಳ ವಿಷಯ” ಎಂದು ಸಿಂಘ್ವಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಚುನಾವಣಾ ಆಯೋಗದ ಮುಂದೆ ಕಾಂಗ್ರೆಸ್ ನಿಯೋಗವು ಸುದೀರ್ಘವಾದ ಸಲ್ಲಿಕೆಗಳನ್ನು ಮಂಡಿಸಿತು. ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನದಂದೇ ಈ ಗೊಂದಲ ಸೃಷ್ಟಿಯಾಗಿರುವುದರಿಂದ ತುರ್ತಾಗಿ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ವಿನಂತಿಸಿತು. ಈ ನಿರ್ಧಾರವು ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆಯನ್ನು ಕಸಿದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿತು. ಆದರೆ, ಕಾಂಗ್ರೆಸ್ ವಾದಕ್ಕೆ ತಕ್ಷಣವೇ ಮಣಿಯದ ಚುನಾವಣಾ ಆಯೋಗದ ಅಧಿಕಾರಿಗಳು, ನಾಮಪತ್ರದ ಪ್ರಮುಖ ಭಾಗವಾಗಿರುವ ‘ಫಾರ್ಮ್ 26’ (ಅಭ್ಯರ್ಥಿಯ ಆಸ್ತಿ ಮತ್ತು ಕ್ರಿಮಿನಲ್ ದಾಖಲೆಗಳ ಅಫಿಡವಿಟ್)ನಲ್ಲಿ ಕಂಡುಬರುವ ನ್ಯೂನತೆಗಳನ್ನು ಅಥವಾ ತಪ್ಪುಗಳನ್ನು ಆಯೋಗವು ಕಾನೂನುಬದ್ಧವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದಾಗಿದ್ದೇಕೆ? ಇಲ್ಲಿದೆ ಮಾಹಿತಿ

ಕೆಲವು ಪ್ರಮುಖ ಅಂಶಗಳನ್ನು ಮರೆಮಾಚಲಾಗಿದೆ ಎಂಬ ಆರೋಪದ ಮೇಲೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರಗಳನ್ನು ಪರಿಶೀಲಿಸಿ ರದ್ದುಗೊಳಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಪ್ರತಿಭಟಿಸಿ ಹಲವಾರು ಕಾಂಗ್ರೆಸ್ ನಾಯಕರು ದೆಹಲಿ ಮತ್ತು ಭೋಪಾಲ್‌ನಲ್ಲಿರುವ ಚುನಾವಣಾ ಆಯೋಗದ ಕಚೇರಿಗಳ ಹೊರಗೆ ಧರಣಿ ನಡೆಸಿದ್ದರು.

ಈಗ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ಅಧಿಕೃತವಾಗಿ ರದ್ದಾಗಿರುವುದರಿಂದ, ಕಣದಲ್ಲಿ ಉಳಿದಿರುವ ಬಿಜೆಪಿಯ ಮೂರನೇ ಅಭ್ಯರ್ಥಿ ಮಹೇಶ್ ಕೇವತ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಇದರೊಂದಿಗೆ, ಮಧ್ಯಪ್ರದೇಶದಿಂದ ತೆರವಾಗಿದ್ದ ಮೂರೂ ರಾಜ್ಯಸಭಾ ಸ್ಥಾನಗಳನ್ನು ಭಾರತೀಯ ಜನತಾ ಪಾರ್ಟಿ ತನ್ನ ಮುಡಿಗೇರಿಸಿಕೊಳ್ಳಲು ವೇದಿಕೆ ಸಿದ್ಧವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *