ಮೀನುಗಾರಿಕೆಗೆ ತಟ್ಟಿದ ತಾಪಮಾನ ಬಿಸಿ: ಮತ್ಸ್ಯಕ್ಷಾಮ, ಮೀನುಗಾರಿಕೆ ಸ್ಥಗಿತಗೊಳಿಸಿ ದಡ ಸೇರಿದ ಸಾವಿರಾರು ಬೋಟ್‌ಗಳು! – Kannada News | Mangaluru Fishing Crisis: Rising Sea Temperatures Lead to Fish Scarcity; Thousands of Boats Anchored Due to Losses

ಮಂಗಳೂರಿನ ಬಂದರಿನಲ್ಲಿ ನಿಂತಿರುವ ಮೀನುಗಾರಿಕೆ ಬೋಟುಗಳುImage Credit source: tv9

ಮಂಗಳೂರು, ಏಪ್ರಿಲ್ 16: ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿಯ (Karnataka Coastal Weather) ಆರ್ಭಟ ಹೆಚ್ಚಾಗಿದ್ದು, ವಾತಾವರಣ ಬೆಂಕಿ ಕೆಂಡದಂತಾಗಿದೆ. ಈ ತಾಪಮಾನದ ಏರಿಕೆ ಈಗ ಸಮುದ್ರಕ್ಕೂ ತಟ್ಟಿದ್ದು, ಮತ್ಸ್ಯಕ್ಷಾಮ ಉಂಟಾಗಿದೆ. ಬಿಸಿಲಿನ ತಾಪ ತಾಳಲಾರದೆ ಮೀನುಗಳು ತಂಪಾದ ಪ್ರದೇಶ ಹುಡುಕಿಕೊಂಡು ಸಮುದ್ರದಾಳದ ಕಲ್ಲುಬಂಡೆಗಳ ನಡುವೆ ಆಶ್ರಯ ಪಡೆಯುತ್ತಿವೆ. ಇದರ ನೇರ ಪರಿಣಾಮ ಮೀನುಗಾರಿಕೆ ಮೇಲೆ ಉಂಟಾಗಿದ್ದು, ಮೀನುಗಾರರು ಕಂಗಾಲಾಗಿದ್ದಾರೆ. ಮೀನುಗಳು ಸಿಗದ ಕಾರಣ ನೂರಾರು ಬೋಟ್​ಗಳು ಮೀನುಗಾರಿಕೆಗೆ ತೆರಳದೆ ಬಂದರಿನಲ್ಲೇ ಉಳಿದಿವೆ. ಇದು ಕೋಟಿ ಕೋಟಿ ವಹಿವಾಟು ನಡೆಸುವ ಮೀನುಗಾರಿಕೆ ಮೇಲೆ ನಕಾರಾತ್ಮಕ (Mangaluru Fishing Crisis) ಪರಿಣಾಮ ಬೀರಿದೆ.

ಮೀನುಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ

ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದವರೆಗೆ ಕರಾವಳಿಯಲ್ಲಿ ಮೀನುಗಾರಿಕೆ ಭರದಿಂದ ಸಾಗುತ್ತಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮೀನುಗಳು ಬಲೆಗೆ ಬೀಳುತ್ತಿಲ್ಲ. ಆಳಸಮುದ್ರ ಮೀನುಗಾರಿಕೆಗೆ ತೆರಳುವ ಒಂದು ಬೋಟ್‌ಗೆ ಸುಮಾರು 10 ರಿಂದ 13 ದಿನಗಳ ಪ್ರಯಾಣಕ್ಕೆ ಕನಿಷ್ಠ 7 ಲಕ್ಷ ರೂಪಾಯಿ ಖರ್ಚು ತಗುಲುತ್ತದೆ. ಆದರೆ, ಸದ್ಯ ಕೇವಲ 2 ಲಕ್ಷ ರೂಪಾಯಿಯಷ್ಟು ಮಾತ್ರ ಮೀನುಗಳು ಲಭ್ಯವಾಗುತ್ತಿವೆ. ಇದರಿಂದ ಪ್ರತಿ ಟ್ರಿಪ್‌ಗೆ ಮೀನುಗಾರರು ಅಂದಾಜು 5 ಲಕ್ಷ ರೂಪಾಯಿಗಳಷ್ಟು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.

ಬಂದರಿನಲ್ಲೇ ಲಂಗರು ಹಾಕಿದ ಬೋಟ್‌ಗಳು

ನಷ್ಟದ ಮೇಲೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿರುವ ಸುಮಾರು 1500ಕ್ಕೂ ಹೆಚ್ಚು ಆಳಸಮುದ್ರ ಬೋಟ್‌ಗಳ ಪೈಕಿ ನೂರಾರು ಬೋಟ್‌ಗಳು ಮೀನುಗಾರಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಬಂದರಿನಲ್ಲೇ ಲಂಗರು ಹಾಕಿವೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಲಾಭದಾಯಕ ವಹಿವಾಟು ನಿರೀಕ್ಷಿಸಿದ್ದ ಮತ್ಸೋದ್ಯಮಿಗಳಿಗೆ ಈ ಬಾರಿಯ ತಾಪಮಾನ ಏರಿಕೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿದೆ.

ಮೀನುಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ

ಕರ್ನಾಟಕದ ಕರಾವಳಿ ತೀರದಲ್ಲಿ ಮೀನುಗಾರಿಕೆ ಕೇವಲ ಉದ್ಯಮವಷ್ಟೇ ಅಲ್ಲದೆ, ಅದು ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ರಾಜ್ಯದಲ್ಲಿ ವಾರ್ಷಿಕವಾಗಿ ಸುಮಾರು 7.30 ಲಕ್ಷ ಟನ್ (2022-23ರ ಅಂಕಿಅಂಶ) ಕಡಲ ಮೀನು ಉತ್ಪಾದನೆಯಾಗುತ್ತಿದ್ದು, ಮೀನುಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಂದಾಗಿದೆ.

ಇದನ್ನೂ ಓದಿ: ಬಿಸಿಲ ಬೇಗೆಯ ನಡುವೆ ಮಳೆಯ ಮುನ್ಸೂಚನೆ: ರಾಜ್ಯದ 10 ಜಿಲ್ಲೆಗಳಲ್ಲಿ ‘ಹೀಟ್ ವೇವ್’ ಎಚ್ಚರಿಕೆ; ಎಲ್ಲೆಲ್ಲಿ ಮಳೆಯಾಗಲಿದೆ?

ಮೀನುಗಾರಿಕಾ ವಲಯವು ರಾಜ್ಯದ ಜಿಡಿಪಿಗೆ (GSDP) ಗಣನೀಯ ಕೊಡುಗೆ ನೀಡುತ್ತದಲ್ಲದೆ, ಸುಮಾರು 6 ಲಕ್ಷಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಆಸರೆಯಾಗಿದೆ. ಆದರೆ, 2024-25ರ ಅವಧಿಯಲ್ಲಿ ಹವಾಮಾನ ವೈಪರೀತ್ಯ ಮತ್ತು ಉಷ್ಣಾಂಶ ಏರಿಕೆಯಿಂದಾಗಿ ಮೀನುಗಾರಿಕೆಯಲ್ಲಿ ಶೇ 30ಕ್ಕೂ ಹೆಚ್ಚು ಇಳಿಕೆಯಾಗಿದ್ದು, ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:07 am, Thu, 16 April 26

Source link

Leave a Reply

Your email address will not be published. Required fields are marked *