ಟೈರ್ ಸ್ಫೋಟಗೊಂಡು ಸರ್ಕಾರಿ ಬಸ್ ಪಲ್ಟಿImage Credit source: Tv9 Kannada
ಧಾರವಾಡ/ಚಿತ್ರದುರ್ಗ, ಜುಲೈ 22: ಚಲಿಸುತ್ತಿರುವಾಗಲೇ ಮುಂದಿನ ಟೈರ್ ಸ್ಫೋಟಗೊಂಡು ಸರ್ಕಾರಿ ಬಸ್ ಪಲ್ಟಿಯಾದ ಪರಿಣಾಮ ಗಂಭೀರ ಗಾಯಗೊಂಡು ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಮುನವಳ್ಳಿಯ ಹುಸೇನಾಬಿ ಕೆಂಗನೂರ ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ 8 ಮಂದಿ ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ. ಗಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ನ ಗ್ಲಾಸ್ಗಳು ಪೀಸ್ ಪೀಸ್
ಟೈರ್ ಸ್ಫೋಟಗೊಂಡ ಪರಿಣಾಮ ಧಾರವಾಡದಿಂದ ಮಿರಜ್ಗೆ ತೆರಳುತ್ತಿದ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಮಹಿಳೆಯರು, ವೃದ್ಧರು ಸೇರಿ ಸುಮಾರು 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅಪಘಾತ ನಡೆದ ಕೂಡಲೇ ಇತರ ವಾಹನಗಳ ಸವಾರರು ಮತ್ತು ಸ್ಥಳೀಯರು ಬಸ್ನಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದಾರೆ. ಅಪಘಾತದ ತೀವ್ರತೆಗೆ ಬಸ್ನ ಗ್ಲಾಸ್ಗಳು ಪೀಸ್ ಪೀಸ್ ಆಗಿದ್ದು, ಮುಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಧಾರವಾಡ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 1600ಕ್ಕೂ ಅಧಿಕ ಬಾಲ ಗರ್ಭಿಣಿಯರ ಕೇಸ್ ಪತ್ತೆ!
ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ಕಾರು
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದ್ದು, ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹರಿದ ಪರಿಣಾಮ ಓರ್ವರು ಅಸುನೀಗಿದ್ದಾರೆ. ಹೊಳಲ್ಕೆರೆ ತಾಲೂಕಿನ ದಗ್ಗೆ ಗ್ರಾಮದ ಪ್ರದೀಪ್(30) ಮೃತ ದುರ್ದೈವಿಯಾಗಿದ್ದು, ಮತ್ತೋರ್ವ ಮಹಿಳೆಯ ಕಾಲು ಮುರಿದಿದೆ. ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ಕಾರು ನುಗ್ಗಿದ್ದು, ಘಟನೆ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
