ಪ್ರಭಾಸ್ (Prabhas), ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ನಟರಲ್ಲಿ ಒಬ್ಬರು. ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಬಳಿಕ ಅವರ ಜನಪ್ರಿಯತೆ ಹತ್ತು ಪಟ್ಟು ಹೆಚ್ಚಾಗಿದೆ. ‘ಬಾಹುಬಲಿ’ಗೆ ಮುಂಚೆ ಪ್ರಭಾಸ್ ಇಷ್ಟು ದೊಡ್ಡ ಸ್ಟಾರ್ ಆಗಿರಲಿಲ್ಲ ಎಂಬುವವರೂ ಇದ್ದಾರೆ. ಆದರೆ ಹಿಂದೊಮ್ಮೆ ಕರಣ್ ಜೋಹರ್, ಪ್ರಭಾಸ್ ಅವರ ಕ್ರೇಜ್ ಬಗ್ಗೆ ವಿವರಿಸಿದ್ದರು. ಅದೂ ‘ಬಾಹುಬಲಿ’ ಬಿಡುಗಡೆಗೆ ಮುಂಚೆಯೇ ಪ್ರಭಾಸ್ ಹವಾ, ಮುಂಬೈನಲ್ಲಿ ಹೇಗಿತ್ತು ಎಂಬುದನ್ನು ಕರಣ್ ಸಂದರ್ಶನದಲ್ಲಿ ವಿವರಿಸಿದ್ದರು.
‘ಬಾಹುಬಲಿ’ ಸಿನಿಮಾವನ್ನು ಕರಣ್ ಜೋಹರ್ ವಿತರಣೆ ಮಾಡಿದ್ದರು. ಪ್ರಭಾಸ್ ಹಾಗೂ ಕರಣ್ ಜೋಹರ್ ಅವರ ಮೊದಲ ಕೊಲ್ಯಾಬರೇಷನ್ ಅದಾಗಿತ್ತು. ಸಿನಿಮಾದ ಪ್ರಚಾರಕ್ಕಾಗಿ ಪ್ರಭಾಸ್ ಮುಂಬೈನಲ್ಲಿ ಕರಣ್ ಜೋಹರ್ ಕಚೇರಿಗೆ ಹೋಗಿದ್ದರು. ಆಗ ಕರಣ್ ಹೇಳಿರುವಂತೆ, ‘ನನ್ನ ಕಚೇರಿಗೆ ಸ್ಟಾರ್ ನಟ, ನಟಿಯರು ಹೊಸಬರೇನೂ ಅಲ್ಲ. ಪ್ರತಿ ದಿನವೂ ಒಬ್ಬರಲ್ಲ ಒಬ್ಬರು ಸ್ಟಾರ್ ನಟ, ನಟಿಯರು ಬರುತ್ತಲೇ ಇರುತ್ತಾರೆ. ಆದರೆ ಪ್ರಭಾಸ್ ಮೊದಲ ಬಾರಿ ನನ್ನ ಕಚೇರಿಗೆ ಬಂದಾಗ ಅಲ್ಲೋಲ-ಕಲ್ಲೋಲವೇ ಆಗಿತ್ತು’ ಎಂದಿದ್ದಾರೆ ಕರಣ್.
ಕಚೇರಿಯ ಒಳಗೆ ಹೊರಗೆ ಜನ ತುಂಬಿ ಹೋಗಿದ್ದರು. ಹೊರಗಿನ ಜನರೆಲ್ಲ ಕಚೇರಿಗೆ ನುಗ್ಗಿ ಬಿಟ್ಟರು, ನಮ್ಮ ಕಚೇರಿಯ ಲಾಬಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಜನ ನಿಂತಿದ್ದರು. ಹೊರಗಡೆ ಅದಕ್ಕಿಂತಲೂ ಹೆಚ್ಚು ಜನ ತುಂಬಿದ್ದರು. ಪ್ರಭಾಸ್, ಪ್ರಭಾಸ್ ಎಂದು ಕಿರುಚಾಡುತ್ತಿದ್ದರು. ಅದನ್ನೆಲ್ಲ ನೋಡಿ ನನಗೆ ಗಾಬರಿ ಆಗಿಬಿಟ್ಟಿತ್ತು. ಆಗ ನನಗೆ ಅರ್ಥವಾಯ್ತು, ಪ್ರಭಾಸ್ ಕ್ರೇಜ್ ಎಂಥಹದ್ದು ಮತ್ತು ಟಿವಿಗಳಲ್ಲಿ ಪ್ರಸಾರ ಆಗುವ ಡಬ್ಬಿಂಗ್ ಸಿನಿಮಾಗಳಿಗೆ ಎಷ್ಟು ದೊಡ್ಡ ಮಾರುಕಟ್ಟೆ ಇದೆ ಎಂಬುದು ಎಂದು ಕರಣ್ ಹೇಳಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಸೆಟ್ನಲ್ಲಿ ಬೆಂಕಿ: ಹಲವರಿಗೆ ಗಾಯ
‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗುವ ಮುಂಚೆ ಪ್ರಭಾಸ್ ಅವರ ತೆಲುಗು ಸಿನಿಮಾಗಳು ಹಿಂದಿಗೆ ಡಬ್ ಆಗಿ ಸೋನಿ, ಸೆಟ್ ಮ್ಯಾಕ್ಸ್ ಇನ್ನಿತರೆ ಚಾನೆಲ್ಗಳಲ್ಲಿ ಪ್ರಸಾರ ಆಗುತ್ತಿರುತ್ತಿತ್ತು. ಆ ಸಿನಿಮಾಗಳನ್ನು ನೋಡಿಯೇ ಉತ್ತರದ ಜನ ಪ್ರಭಾಸ್ ಅವರ ಫ್ಯಾನ್ಸ್ ಆಗಿಬಿಟ್ಟಿದ್ದರು. ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾದ ಬಳಿಕವಂತೂ ಪ್ರಭಾಸ್ ಜನಪ್ರಿಯತೆ ಹತ್ತು ಪಟ್ಟು ಹೆಚ್ಚಾಯ್ತು.
ಇದೀಗ ಪ್ರಭಾಸ್ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಭಾಸ್ ಪ್ರಸ್ತುತ ಸಂದೀಪ್ ರೆಡ್ಡಿ ವಂಗಾ ಜೊತೆಗೆ ‘ಸ್ಪಿರಿಟ್’ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ರಘು ಹನುಪುಡಿ ನಿರ್ದೇಶನದ ‘ಫೌಜಿ’ ಸಿನಿಮಾ ಬಹುತೇಕ ಮುಗಿಸಿದ್ದಾರೆ. ಕಲ್ಕಿ 2898 ಎಡಿ ಸಿನಿಮಾದ ಎರಡನೇ ಭಾಗದಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ‘ಸಲಾರ್ 2’ಗೆ ಕೈಹಾಕಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ