ಮುಂಬೈ, ಜುಲೈ 6: ಮುಂಬೈ (Mumbai Rains) ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನ ಹೊಸದಾಗಿ ನಿರ್ಮಿಸಲಾದ ‘ಮಿಸ್ಸಿಂಗ್ ಲಿಂಕ್’ (Missing Link) ಯೋಜನೆಯ ಸುರಂಗ ಮಾರ್ಗದೊಳಗೆ ಬೆಟ್ಟದ ಮೇಲಿಂದ ಭಾರಿ ಪ್ರಮಾಣದ ನೀರು ಜಲಪಾತದಂತೆ ಧುಮುಕಿದೆ. ಸುರಂಗದ ಒಳಗಡೆ ನದಿಯಂತೆ ನೀರು ನುಗ್ಗುತ್ತಿರುವುದನ್ನು ಕಂಡು ವಾಹನ ಸವಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋಗಳು ವೈರಲ್ ಆಗಿದ್ದು, ಸುರಂಗದ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.
ಮುಂಬೈನಲ್ಲಿ ನಿರಂತರ ಮಳೆಯಿಂದಾಗಿ ಸುರಂಗ ಮಾರ್ಗದ ಸಮೀಪವಿರುವ ಬೆಟ್ಟದ ಇಳಿಜಾರಿನಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ದೊಡ್ಡ ಬಂಡೆಗಳು ಮತ್ತು ಮಣ್ಣು ರಸ್ತೆಯ ಮೇಲೆ ಬಿದ್ದಿದ್ದರಿಂದ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನ ಈ ಪ್ರಮುಖ ‘ಮಿಸ್ಸಿಂಗ್ ಲಿಂಕ್’ ರಸ್ತೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅದೃಷ್ಟವಶಾತ್, ಭೂಕುಸಿತ ಸಂಭವಿಸಿದ ಸಮಯದಲ್ಲಿ ಯಾವುದೇ ವಾಹನಗಳು ಸಿಲುಕದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ಖಂಡಾಲಾ ಘಾಟ್‌ನ ಕಡಿದಾದ ತಿರುವುಗಳನ್ನು ತಪ್ಪಿಸಲು ಈ ಬೃಹತ್ ಸುರಂಗ ಮಾರ್ಗ ಮತ್ತು ಮೇಲ್ಸೇತುವೆಯ ‘ಮಿಸ್ಸಿಂಗ್ ಲಿಂಕ್’ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಮೊದಲ ಮಳೆಗೇ ಈ ಅತ್ಯಾಧುನಿಕ ಸುರಂಗದೊಳಗೆ ನೀರು ನುಗ್ಗಿರುವುದು ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.
(Video Source: ANI)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
