ಮುನಿಸಿಕೊಂಡ ಬಾಲಕಿಯನ್ನು ಮನೆಗೆ ಕರೆಸಿ ಊಟ ಬಡಿಸಿದ ರಶ್ಮಿಕಾ ಮಂದಣ್ಣ, ವಿಜಯ್

ಮುನಿಸಿಕೊಂಡ ಬಾಲಕಿಯನ್ನು ಮನೆಗೆ ಕರೆಸಿ ಊಟ ಬಡಿಸಿದ ರಶ್ಮಿಕಾ ಮಂದಣ್ಣ, ವಿಜಯ್

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ದಂಪತಿಯು ತಮ್ಮ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಫ್ಯಾನ್ಸ್ ಮನ ಗೆದ್ದಿದ್ದಾರೆ. ತನ್ನನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಮುನಿಸಿಕೊಂಡಿದ್ದ ಬಾಲಕಿಯನ್ನು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡು ಪ್ರೀತಿಯಿಂದ ಆತಿಥ್ಯ ನೀಡಿದ್ದಾರೆ. ಈ ವಿಡಿಯೋವನ್ನು ಬಾಲಕಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಫೆಬ್ರವರಿ 28ರಂದು ರಶ್ಮಿಕಾ ಮತ್ತು ವಿಜಯ್ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ಪುಟ್ಟ ಬಾಲಕಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಳು. ‘ನಾನೂ ನಿಮ್ಮ ಅಭಿಮಾನಿ ಅಲ್ವಾ? ನನ್ನನ್ನೇಕೆ ಮದುವೆಗೆ ಕರೆದಿಲ್ಲ? ಎಲ್ಲರಿಗೂ ಲಡ್ಡು ಕೊಡುತ್ತಿದ್ದೀರಿ, ಅನ್ನದಾನ ಮಾಡುತ್ತಿದ್ದೀರಿ, ನನಗೆ ಮಾತ್ರ ಇಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನಿಸಿದ್ದಳು. ಈ ವಿಡಿಯೋ ಕಂಡು ಮನಸೋತಿದ್ದ ವಿಜಯ್ ದೇವರಕೊಂಡ, ‘ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ’ ಎಂದು ಭರವಸೆ ನೀಡಿದ್ದರು.

ತಮ್ಮ ಮಾತಿನಂತೆ ಈ ದಂಪತಿ ಇತ್ತೀಚೆಗೆ ಆ ಬಾಲಕಿ ಮತ್ತು ಆಕೆಯ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ವಿಜಯ್ ಆ ಪುಟ್ಟ ಬಾಲಕಿಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರೆ, ರಶ್ಮಿಕಾ ಮಂದಣ್ಣ ಆಕೆಯ ತಟ್ಟೆಗೆ ಲಡ್ಡುಗಳನ್ನು ಬಡಿಸಿ ಪ್ರೀತಿಯಿಂದ ಮುತ್ತು ನೀಡಿದ್ದಾರೆ. ವಿಜಯ್ ಕೂಡ ಆಕೆಗೆ ಪ್ರೀತಿಯಿಂದ ಊಟ ಬಡಿಸಿದ್ದಾರೆ. ‘ನಾವಿಬ್ಬರು ಫ್ರೆಂಡ್ಸ್ ಅಲ್ವಾ’ ಎಂದು ಬಾಲಕಿ ಕೇಳಿದಾಗ ವಿಜಯ್ ಮತ್ತು ರಶ್ಮಿಕಾ ನಗುತ್ತಾ ‘ಹೌದು’ ಎಂದಿದ್ದಾರೆ.

ವೈರಲ್ ವಿಡಿಯೋ:

ಈ ಭೇಟಿಯ ಬಗ್ಗೆ ಬರೆದುಕೊಂಡಿರುವ ಬಾಲಕಿಯ ಕುಟುಂಬ, ‘ರೀಲ್ ಟು ರಿಯಲ್… ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದು ಅದ್ಭುತ ಅನುಭವ. ಅವರು ನಮ್ಮನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಇಬ್ಬರೂ ತುಂಬಾ ಸರಳ ವ್ಯಕ್ತಿತ್ವದವರು’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹಳದಿ ಶಾಸ್ತ್ರದ ಕಲರ್​ಫುಲ್ ಫೋಟೋ ಗ್ಯಾಲರಿ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಯ ಸರಳತೆಗೆ ಮತ್ತು ಅಭಿಮಾನಿಯ ಮೇಲಿರುವ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವೃತ್ತಿಜೀವನದ ವಿಚಾರಕ್ಕೆ ಬಂದರೆ, ರಶ್ಮಿಕಾ ಮತ್ತು ವಿಜಯ್ ಶೀಘ್ರದಲ್ಲೇ ‘ರಣಬಾಲಿ’ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಬಳಿಕ ಅವರು ಒಂದಾಗಿ ನಟಿಸಲಿರುವ ಸಿನಿಮಾ ಇದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *