ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ 2026 ರಿಂದ ಹೊರಗಿಟ್ಟಿರುವುದು ಈಗ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಮುಸ್ತಾಫಿಜುರ್ ಅವರನ್ನು ಐಪಿಎಲ್ನಿಂದ ಹೊರಗಿಟ್ಟ ನಂತರ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸರಣಿಯನ್ನು ರದ್ದುಗೊಳಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದೆಲ್ಲದರ ನಡುವೆ ಈ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದ್ದು, ಈ ವಿಚಾರವನ್ನು ಐಸಿಸಿಗೆ ಮುಟ್ಟಿಸುವುದಾಗಿ ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್ ಹೇಳಿಕೆ ನೀಡಿದ್ದಾರೆ.
ಭಾರತಕ್ಕೆ ಬರುವುದಿಲ್ಲ ಬಾಂಗ್ಲಾ ತಂಡ?
ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಕೈಬಿಟ್ಟ ನಂತರ ಮಾಧ್ಯಮಗಳಿಗೆ ಮಾತನಾಡಿರುವ ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್, ಟಿ20 ವಿಶ್ವಕಪ್ ಬಗ್ಗೆ ಐಸಿಸಿ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. ‘ಐಸಿಸಿ ಟಿ20 ವಿಶ್ವಕಪ್ ಆಯೋಜಿಸುತ್ತದೆ ಮತ್ತು ಭಾರತ ಅದರ ಆತಿಥೇಯವಾಗಿದೆ. ನಾವು ಏನಾದರೂ ಚರ್ಚಿಸಬೇಕಾದರೆ, ನಾವು ಐಸಿಸಿ ಜೊತೆ ಚರ್ಚಿಸುತ್ತೇವೆ’ ಎಂದಿದ್ದಾರೆ. ಬಾಂಗ್ಲಾದೇಶದ ಮಾಜಿ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಕೂಡ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಗಿಟ್ಟಿರುವ ಬಗ್ಗೆ ಹೇಳಿಕೆ ನೀಡಿದ್ದು, ‘ಭಾರತ ಐಸಿಸಿ ಕಾರ್ಯಕ್ರಮವನ್ನು ಆಯೋಜಿಸಲು ಸಂಪೂರ್ಣವಾಗಿ ಅನರ್ಹ. ಇಂತಹ ಧರ್ಮಾಂಧ ದೇಶವು ಎಂದಿಗೂ ಅಂತರರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಬಾರದು. ಬಿಸಿಸಿಐ ವಿರುದ್ಧ ಹೋರಾಡಲು ಬಿಸಿಸಿಬಿ ಸರ್ಕಾರ ಮತ್ತು ಇತರ ಕ್ರಿಕೆಟ್ ಮಂಡಳಿಗಳೊಂದಿಗೆ ತೊಡಗಿಸಿಕೊಳ್ಳಬೇಕು. ಭಾರತವನ್ನು ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಅನರ್ಹವೆಂದು ಘೋಷಿಸಬೇಕು’ ಎಂದು ಆಸಿಫ್ ಮಹಮೂದ್ ಹೇಳಿದ್ದಾರೆ.
ಐಪಿಎಲ್ನಿಂದ ಮುಸ್ತಾಫಿಜುರ್ ಔಟ್
ವಾಸ್ತವವಾಗಿ 2026 ರ ಐಪಿಎಲ್ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ 9.2 ಕೋಟಿಗೆ ಖರೀದಿಸಿತ್ತು. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ, ಕೆಕೆಆರ್ ಫ್ರಾಂಚೈಸಿ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕುತ್ತಿದ್ದರು. ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಹಾಕಬೇಕು, ಇಲ್ಲದಿದ್ದರೆ ಐಪಿಎಲ್ ನಡೆಯಲು ಬಿಡುವುದಿಲ್ಲ ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಅಂತಿಮವಾಗಿ ಬಿಸಿಸಿಐ, ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಕೆಕೆಆರ್ಗೆ ಆದೇಶಿಸಿತ್ತು. ಆ ಪ್ರಕಾರ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಹಾಕಲಾಗಿದೆ. ಇದರಿಂದ ಕೆರಳಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಮ್ಮ ತಂಡ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಐಸಿಸಿ ಬಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
