ಚಿಕ್ಕಮಗಳೂರು, ಏ.17: ರಾಜ್ಯದಲ್ಲಿ ಬೇಸಿಗೆ ಬಿಸಿಯ ನಡುವೆ ನೆನ್ನೆ ಕೆಲವು ಕಡೆ ಭಾರೀ ಮಳೆ ಬಂದಿದೆ. ಈ ಮಳೆಯ ಅಬ್ಬರಕ್ಕೆ ಚಿಕ್ಕಮಗಳೂರಿನಲ್ಲಿ ದೊಡ್ಡ ಅನಾಹುತಗಳು ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ಬಿರುಗಾಳಿಯ ಹೊಡೆತಕ್ಕೆ ಬೃಹತ್ ತೆಂಗಿನಮರವೊಂದು ಅಂಗನವಾಡಿ ಶಿಕ್ಷಕಿ ಗೌರಮ್ಮ ಅವರಿಗೆ ಸೇರಿದ ಮನೆಯ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಚಾವಣಿಯ ಹೆಂಚುಗಳು ಪುಡಿಪುಡಿಯಾಗಿದ್ದು, ಕಟ್ಟಡಕ್ಕೆ ಹಾನಿಯಾಗಿದೆ. ಮರ ಬೀಳುವ ಸಮಯದಲ್ಲಿ ಮನೆಯಲ್ಲೇ ಇದ್ದ ಕುಟುಂಬಸ್ಥರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಬಣಕಲ್ ಮತ್ತು ಮತ್ತಿಕಟ್ಟಿ ಗ್ರಾಮಗಳ ನಡುವಿನ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಅಡ್ಡಲಾಗಿ ಬಿದ್ದಿದೆ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ. ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ತೋಟಗಳಲ್ಲಿನ ಬೆಳೆಗಳಿಗೂ ಹಾನಿಯಾಗುವ ಭೀತಿ ಎದುರಾಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇನ್ನು ಚಿತ್ರದುರ್ಗದ ಕೆಲವೊಂದು ಕಡೆ ಮಳೆಯಿಂದ ಭಾರೀ ಪ್ರಮಾಣದ ಹಾನಿಗಳು ಆಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
