
ಬಾಗಲಕೋಟೆ, (ಮಾರ್ಚ್ 22): ಬಾಗಲಕೋಟೆ ಉಪಚುನಾವಣೆಯ (Bagalkot By Election) ಕಾಂಗ್ರೆಸ್ ಟಿಕೆಟ್ ಎಚ್ ವೈ ಮೇಟಿ ಪುತ್ರ ಉಮೇಶ್ ಮೇಟಿ ಅವರಿಗೆ ನೀಡಲಾಗಿದೆ. ಟಿಕೆಟ್ ಗಾಗಿ ನಾಲ್ವರು ಮೇಟಿ ಮಕ್ಕಳ ನಡುವೆ ಕಿತ್ತಾಟ ಶುರುವಾಗಿತ್ತು. ಅಂತಿಮವಾಗಿ ಸಿದ್ದರಾಮಯ್ಯ ಸಂಧಾನಸಭೆ ಮಾಡಿ ಕೊನೆಗೆ ಉಮೇಶ್ ಅವರಿಗೆ ಮಣೆ ಹಾಕಿದ್ದಾರೆ. ಇನ್ನು ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದ ಮಹಾದೇವಿ ಮೇಟಿ ಸಹ ತಣ್ಣಗಾಗಿದ್ದಾರೆ. ಯಾಕಂದ್ರೆ ಕೆಲ ದಿನಗಳಿಂದಷ್ಟೇ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಸ್ಪರ್ಧೆ ಮಾಡುವ ಬಗ್ಗೆ ಬಹಿರಂಗವಾಗಿ ಹೇಳಿದ್ದರು. ಆದ್ರೆ, ಇದೀಗ ಸಿಎಂ ಸಂಧಾನ ಸಭೆ ಮಾಡಿದ ಬಳಿಕ ಮಹಾದೇವಿ ಮೇಟಿ ಕೂಲ್ ಆಗಿದ್ದು, ಸಹೋದರ ಉಮೇಶ್ ಗೆ ಟಿಕೆಟ್ ನೀಡಿರುವುದಕ್ಕೆ ಸಂತಸಗೊಂಡಿದ್ದಾರೆ. ಅಲ್ಲದೇ ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲುಸುತ್ತೇವೆ ಎನ್ನುವುದನ್ನು ಸಹ ಹೇಳಿದ್ದಾರೆ. ಇನ್ನು ಟಿವಿ9ಗೆ ಮಹಾದೇವಿ ಮೇಟಿ ಪ್ರತಿಕ್ರಿಯಿಸಿದ್ದು, ಉಮೇಶ್ ಮೇಟಿಗೆ ಟಿಕೆಟ್ ಕೊಟ್ಡಿದ್ದು ಸಂತಸ ತಂದಿದೆ. ನಾನು ಅಂದುಕೊಂಡಂತೆ ಸಹೋದರ ಉಮೇಶ್ ಮೇಟಿಗೆ ಟಿಕೆಟ್ ನೀಡಲಾಗಿದೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಎಲ್ಲ ಬಂಡಾಯ,ಭಿನ್ನಾಭಿಪ್ರಾಯ ಸರಿಯಾಗಿದೆ. ನಾಳೆ ನಾಮಪತ್ರ ಸಲ್ಲಿಸಲು ನಾನು ಸಹೋದರನ ಜೊತೆ ಹೋಗುತ್ತೇನೆ. ಪ್ರಚಾರಕ್ಕೂ ನಾಲ್ಕು ಜನ ಮಕ್ಕಳು ಒಟ್ಟಾಗಿ ಹೋಗುತ್ತೇವೆ ಎಂದರು.