ರಾಂಪುರ, ಜುಲೈ 21: ಪತಿ(Husband) ತನ್ನೊಂದಿಗಿರಬೇಕು, ತನ್ನೊಂದಿಗಿರಬೇಕು ಎಂದು ಇಬ್ಬರು ಹೆಂಡತಿಯರು ಪಟ್ಟು ಹಿಡಿದಿದ್ದು, ಗಂಡನಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಈ ಕಲಹ ಬಗೆಹರಿಸಲು ಗ್ರಾಮೀಣ ಪಂಚಾಯತಿ ನೀಡಿದ ತೀರ್ಪು ಇಡೀ ಉತ್ತರ ಪ್ರದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಾರದ ಏಳು ದಿನಗಳನ್ನು ಇಬ್ಬರು ಪತ್ನಿಯರ ನಡುವೆ ಹಂಚಿಕೆ ಮಾಡಿ ಪಂಚಾಯಿತಿ ಅಚ್ಚರಿಯ ‘ಸಮಪಾಲು-ಸಮಬಾಳು’ ಸೂತ್ರವನ್ನು ರೂಪಿಸಿದೆ.
ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ದಧಿಯಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆ ವ್ಯಕ್ತಿಗೆ ಸುಮಾರು 14 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಪತ್ನಿಯ ಒಪ್ಪಿಗೆಯಿಲ್ಲದೆ ಆತ ಎರಡನೇ ಮದುವೆಯಾಗಿದ್ದ. ಎರಡನೇ ಪತ್ನಿಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಯುವಕ ಸಂಪೂರ್ಣವಾಗಿ ಮೊದಲ ಪತ್ನಿಯನ್ನು ನಿರ್ಲಕ್ಷಿಸಿ, ಹೆಚ್ಚಿನ ಸಮಯವನ್ನು ಎರಡನೇ ಹೆಂಡತಿಯೊಂದಿಗೇ ಕಳೆಯಲು ಪ್ರಾರಂಭಿಸಿದ. ಇದರಿಂದ ಬೇಸರ ಉಂಟಾಗಿ ಮೊದಲ ಪತ್ನಿ ತನಗೆ ಜೀವನ ನಿರ್ವಹಣೆಗೆ ಹಣ ಹಾಗೂ ಬೆಂಬಲ ಸಿಗುತ್ತಿಲ್ಲ ಎಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಳು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ ನಂತರ, ಗ್ರಾಮದ ಹಿರಿಯರು ಹಾಗೂ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಪಂಚಾಯಿತಿ ಕರೆಯಲಾಯಿತು. ಸುದೀರ್ಘ ಚರ್ಚೆಯ ನಂತರ ಪಂಚಾಯಿತಿ ಈ ಕೆಳಗಿನಂತೆ ಲಿಖಿತ ಒಪ್ಪಂದ ರೂಪಿಸಿತು. ಮೂರು ದಿನ ಒಂದು ಪತ್ನಿ ಜತೆ, ಮತೆತ ಮೂರು ದಿನ ಎರಡನೇ ಜತೆ ಕಳೆಯಬೇಕು ಎಂದು ತೀರ್ಪು ನೀಡಲಾಗಿದೆ.
ಮತ್ತಷ್ಟು ಓದಿ: ರೋಗಿಗಳ ಜೀವದ ಜೊತೆ ಚೆಲ್ಲಾಟ: ಪತಿ ಸರಕಾರಿ ವೈದ್ಯ, ಆದರೆ ಚಿಕಿತ್ಸೆ ನೀಡೋದು ಪತ್ನಿ!
ಭಾನುವಾರ ಆತನಿಗೆ ಸಂಪೂರ್ಣ ಸ್ವಾತಂತ್ರ್ಯ, ಅವರು ತನ್ನ ಇಷ್ಟದಂತೆ ಯಾರ ಜೊತೆಯಾದರೂ ಇರಬಹುದು ಅಥವಾ ಎಲ್ಲಿಗಾದರೂ ಹೋಗಬಹುದು ಎಂದು ಹೇಳಲಾಗಿದೆ.
ಇಷ್ಟೇ ಅಲ್ಲದೆ, ಮೊದಲ ಪತ್ನಿ ಮತ್ತು ಮಕ್ಕಳ ದಿನನಿತ್ಯದ ನಿರ್ವಹಣೆಗಾಗಿ ಪ್ರತಿ ತಿಂಗಳು ಪಡಿತರ ಹಾಗೂ ಸಾಪ್ತಾಹಿಕ ಖರ್ಚಿನ ಹಣವನ್ನು ಗಂಡ ಕಡ್ಡಾಯವಾಗಿ ನೀಡಬೇಕೆಂದು ಪಂಚಾಯಿತಿ ಆದೇಶಿಸಿದೆ. ಪಂಚಾಯಿತಿಯ ಈ ವಿಶಿಷ್ಟ ತೀರ್ಪಿಗೆ ಇಬ್ಬರೂ ಹೆಂಡತಿಯರು ಹಾಗೂ ಗಂಡ ಒಪ್ಪಿಗೆ ಸೂಚಿಸಿದ್ದಾರೆ. ಒಪ್ಪಂದದ ನಂತರ ಮೊದಲ ಪತ್ನಿ ಪೋಲಿಸ್ ಠಾಣೆಯಲ್ಲಿದ್ದ ತನ್ನ ದೂರನ್ನು ವಾಪಸ್ ಪಡೆದುಕೊಂಡಿದ್ದಾಳೆ. ಪ್ರಕರಣವು ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
