ಬೆಂಗಳೂರು, ಜು.18: ರಾಜಧಾನಿ ಬೆಂಗಳೂರಿನಲ್ಲಿ ವೀಕೆಂಡ್ ಮೂಡ್‌ನಲ್ಲಿದ್ದ ಜನರಿಗೆ ವರುಣದೇವ ತಂಪಾದ ಶಾಕ್ ನೀಡಿದ್ದಾನೆ. ಇಂದು (ಜುಲೈ 18) ಮಧ್ಯಾಹ್ನ ಸುಮಾರು 3:30ರ ನಂತರ ಬೆಂಗಳೂರು ನಗರದ ಕೇಂದ್ರ ಭಾಗ ಹಾಗೂ ಸುತ್ತಮುತ್ತಲಿನ ಹಲವು ಪ್ರಮುಖ ಬಡಾವಣೆಗಳಲ್ಲಿ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಆರಂಭವಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.
ನಗರದ ಹೃದಯಭಾಗವಾದ ಮೆಜೆಸ್ಟಿಕ್ ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ವಿಧಾನಸೌಧ ಸುತ್ತಮುತ್ತ, ವಸಂತನಗರ, ಶೇಷಾದ್ರಿಪುರಂ, ಟೌನ್‌ಹಾಲ್, ಕೆ.ಆರ್. ಮಾರುಕಟ್ಟೆ (ಮಾರ್ಕೆಟ್) ಮತ್ತು ಚಾಮರಾಜಪೇಟೆ. ರಾಜಾಜಿನಗರ, ಮಲ್ಲೇಶ್ವರಂ, ಪ್ಯಾಲೇಸ್ ಗುಟ್ಟಹಳ್ಳಿ ಹಾಗೂ ಮಾಗಡಿ ರಸ್ತೆ ಸುತ್ತಮುತ್ತಲಿನ ಪರಿಸರದಲ್ಲಿ ಉತ್ತಮ ಮಳೆಯಾಗಿದೆ.
ದಿಢೀರ್ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿದ್ದ ಪಾದಚಾರಿಗಳು ಹಾಗೂ ಬೈಕ್ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಮಳೆಯಿಂದ ರಕ್ಷಣೆ ಪಡೆಯಲು ಛತ್ರಿ ಇಲ್ಲದ ಜನರು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ಮುಂದೆ ಸಾಲು ಗಟ್ಟಿ ನಿಂತಿದ್ದಾರೆ. ಶನಿವಾರವಾದ್ದರಿಂದ ಮಾಗಡಿ ರಸ್ತೆ ಮತ್ತು ಮಾರ್ಕೆಟ್ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟವಾಗಿತ್ತು. ಅನಿವಾರ್ಯವಾಗಿ ಬೈಕ್ ಸವಾರರು ಮಳೆಯಲ್ಲೇ ನೆನೆಯುತ್ತಾ ವಾಹನ ಚಲಾಯಿಸಬೇಕಾಯಿತು.
ಇದನ್ನೂ ಓದಿ: ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!
ಮಳೆಯಿಂದ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ವೀಕೆಂಡ್ ಸಮಯವಾಗಿರುವುದರಿಂದ ಸಂಜೆಯ ವೇಳೆಗೆ ರಸ್ತೆಗಳಲ್ಲಿ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈ ಮಳೆಯು ರಾಜಧಾನಿಯ ಜನತೆಗೆ ಸೆಕೆಯಿಂದ ಕೊಂಚ ನಿರಾಳತೆ ತಂದಿದ್ದರೂ, ರಸ್ತೆಗಿಳಿದ ಪ್ರಯಾಣಿಕರಿಗೆ ಮಾತ್ರ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
