ಬೆಂಗಳೂರು, ಮೇ 31: ನಿರ್ವಹಣಾ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳು ಇಂದು (ಮೇ 31) ಬೆಳಿಗ್ಗೆ 7 ಗಂಟೆಯಿಂದಲೇ ಸಂಪೂರ್ಣವಾಗಿ ಲಭ್ಯವಿರುತ್ತವೆ. ಹೀಗಾಗಿ ಪ್ರಯಾಣಿಕರು ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್ಸಿಎಲ್ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನೇರಳೆ ಮಾರ್ಗದ ಕೆಲ ನಿಲ್ದಾಣಗಳ ನಡುವೆ ಇಂದು ಸಂಚಾರ ವ್ಯತ್ಯಯದ ಬಗ್ಗೆ ಈ ಹಿಂದೆಯೇ BMRCL ಮಾಹಿತಿ ನೀಡಿತ್ತು.
BMRCL ಪ್ರಕಟಣೆಯಲ್ಲಿ ಏನಿದೆ?
ಸಾರ್ವಜನಿಕ ಮಾಹಿತಿ-ನಿರ್ವಹಣಾ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ಮೆಟ್ರೋ ರೈಲು ಸೇವೆಗಳು ಇಂದು ಬೆಳಿಗ್ಗೆ 07:00 ಗಂಟೆಯಿಂದ ಸಂಪೂರ್ಣ ನೇರಳೆ ಮಾರ್ಗದಲ್ಲಿ ಲಭ್ಯವಿರುತ್ತವೆ. ಪ್ರಯಾಣಿಕರು ಈ ಮಾಹಿತಿಯನ್ನು ಗಮನಿಸಿ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
— ನಮ್ಮ ಮೆಟ್ರೋ (@OfficialBMRCL) May 31, 2026
ನೇರಳೆ ಮಾರ್ಗದಲ್ಲಿರುವ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಭಾಗದಲ್ಲಿ ಅತ್ಯಗತ್ಯ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವ ಉದ್ದೇಶದಿಂದ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಮೇ 31ರಂದು ಬದಲಾವಣೆ ಮಾಡಲಾಗಿದೆ. ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್ ಮೆಜೆಸ್ಟಿಕ್) ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 7 ಗಂಟೆಯಿಂದ 9ರ ವರೆಗೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಬೆಳಿಗ್ಗೆ 9 ಗಂಟೆಯ ನಂತರ ಇಡೀ ನೇರಳೆ ಮಾರ್ಗದಲ್ಲಿ ಎಂದಿನಂತೆ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಮೇ 29ರಂದು ಪ್ರಕಟಣೆ ಮೂಲಕ ಬಿಎಂಆರ್ಸಿಎಲ್ ತಿಳಿಸಿತ್ತು. ಆದರೆ ನಿರ್ವಹಣಾ ಕಾಮಗಾರಿಗಳು ನಿಗದಿತ ಸಮಯಕ್ಕೂ ಮೊದಲೇ ಮುಗಿದಿರುವ ಕಾರಣ ಬೆಳಿಗ್ಗೆ 9 ಗಂಟೆಯ ಬದಲು 7 ಗಂಟೆಯಿಂದಲೇ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ.
ಇದನ್ನೂ ಓದಿ: ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ; BMRCL ವಿರುದ್ಧ ಪ್ರಯಾಣಿಕರ ಆಕ್ರೋಶ
ವಾರಾಂತ್ಯ ಪ್ರಯಾಣಿಕರು ನಿರಾಳ
ರಜೆಯ ದಿನವಾದ ಭಾನುವಾರವೇ ಮೆಟ್ರೋ ಸೇವೆಯಲ್ಲಿ ವ್ಯತ್ಯಯದ ಬಗ್ಗೆ ಈ ಹಿಂದೆ ಬಿಎಂಆರ್ಸಿಎಲ್ ತಿಳಿಸಿದ್ದ ಕಾರಣ ಪ್ರಯಾಣಿಕರು ಕೊಂಚ ನಿರಾಸೆಗೊಂಡಿದ್ದರು. ಆದರೆ ಅವರಿಗೀಗ ಬಿಎಂಆರ್ಸಿಎಲ್ ನೀಡಿರುವ ಸುದ್ದಿ ನಿರಾಳರಾಗುವಂತೆ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 7:54 am, Sun, 31 May 26
