ಮೆಲ್ಬೋರ್ನ್ ರೆನೆಗೇಡ್ಸ್ vs ಪರ್ತ್ ಸ್ಕಾರ್ಚರ್ಸ್: ಚೆನ್ನೈನಲ್ಲಿ ಬಿಬಿಎಲ್ ಪಂದ್ಯ! – Kannada News | Melbourne Renegades Vs Perth Scorchers on 12th December at the Chepauk Stadium

ಆಸ್ಟ್ರೇಲಿಯಾದ ಜನಪ್ರಿಯ ಬಿಗ್ ಬ್ಯಾಷ್ ಲೀಗ್​ (BBL) ಟಿ20 ಟೂರ್ನಿಯ 16ನೇ ಸೀಸನ್​ನ ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ  ನಡೆಯಲಿರುವುದು ಖಚಿತವಾಗಿದೆ. 2026ರ ಡಿಸೆಂಬರ್ 12 ರಂದು ಚೆನ್ನೈನ ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಆಯೋಜಿಸುತ್ತಿರುವ ಟೂರ್ನಿಯೊಂದರ ಪಂದ್ಯವು ಭಾರತದಲ್ಲಿ ನಡೆಯುತ್ತಿರುವುದು ಇತಿಹಾಸದಲ್ಲೇ ಇದೇ ಮೊದಲು. ಭಾರತದ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಮತ್ತು ಬಿಬಿಎಲ್ ಟೂರ್ನಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕ್ರಿಕೆಟ್ ಆಸ್ಟ್ರೇಲಿಯಾ ಈ ಮಾಸ್ಟರ್ ಪ್ಲಾನ್ ಮಾಡಿದೆ.

ಅಧಿಕೃತ ಘೋಷಣೆ ಯಾವಾಗ?

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಜಂಟಿಯಾಗಿ ಈ ಮಹತ್ವದ ಪಂದ್ಯವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಪ್ರಸ್ತುತ ಮಾಹಿತಿ ಪ್ರಕಾರ, ಶುಕ್ರವಾರದೊಂದು ಬಿಗ್ ಬ್ಯಾಷ್ ಲೀಗ್ ಪಂದ್ಯವು ಭಾರತದಲ್ಲಿ ನಡೆಯುವುದನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ.

ಯಾವ ತಂಡದ್ದು ಹೋಮ್ ಗ್ರೌಂಡ್?

ಈ ಪಂದ್ಯದಲ್ಲಿ ಎರಡು ವಿದೇಶಿ ತಂಡಗಳು ಕಣಕ್ಕಿಳಿಯುತ್ತಿರುವುದರಿಂದ ಚೆನ್ನೈ ಯಾವ ತಂಡದ್ದು ಹೋಮ್ ಗ್ರೌಂಡ್ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಮೆಲ್ಬೋರ್ನ್ ರೆನೆಗೇಡ್ಸ್.

ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಆತಿಥೇಯ ತಂಡವಾಗಿ ಕಣಕ್ಕಿಳಿಯಲಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ತನ್ನ ಒಂದು ಹೋಮ್ ಪಂದ್ಯವನ್ನು ಭಾರತದಲ್ಲಿ ಆಡಲು ನಿರ್ಧರಿಸಿದೆ.

ಚೆಪಾಕ್ ಸವಾಲು!

ಚೆನ್ನೈನ ಚೆಪಾಕ್ ಮೈದಾನವು ಸಾಂಪ್ರದಾಯಿಕವಾಗಿ ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡುತ್ತದೆ. ಆಸ್ಟ್ರೇಲಿಯಾದ ವೇಗದ ಪಿಚ್‌ಗಳಲ್ಲಿ ಆಡಿ ರೂಢಿಯಿರುವ ಮೆಲ್ಬೋರ್ನ್ಸ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡಗಳ ಆಟಗಾರರಿಗೆ ಚೆಪಾಕ್​ನ ಟರ್ನಿಂಗ್ ಟ್ರ್ಯಾಕ್ ಹೊಸ ಸವಾಲೊಡ್ಡಲಿದೆ. ಈ ಸವಾಲನ್ನು ಮೆಟ್ಟಿ ನಿಂತು ಮೊದಲ ಮ್ಯಾಚ್​ನಲ್ಲಿ ಗೆಲ್ಲುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

ಭಾರತದಲ್ಲಿ ಟೂರ್ನಿ ಆಯೋಜಿಸುತ್ತಿರುವುದು ಯಾಕೆ?

ವಿಶ್ವ ಕ್ರಿಕೆಟ್‌ನಲ್ಲಿ ಭಾರತವು ಅತಿ ಹೆಚ್ಚು ವೀಕ್ಷಕರನ್ನು ಮತ್ತು ಬಲಿಷ್ಠ ಆರ್ಥಿಕ ಮಾರುಕಟ್ಟೆಯನ್ನು ಹೊಂದಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ನೇರವಾಗಿ ತಲುಪುವ ಮೂಲಕ ಬಿಬಿಎಲ್ ಟೂರ್ನಿಯ ಡಿಜಿಟಲ್ ವೀಕ್ಷಣೆ ಮತ್ತು ಜಾಗತಿಕ ಜನಪ್ರಿಯತೆ ಹಾಗೂ ಪ್ರಾಯೋಜಕತ್ವಗಳನ್ನು  ಗಣನೀಯವಾಗಿ ಹೆಚ್ಚಿಸಿಕೊಳ್ಳುವುದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ತನ್ನ ಅಧೀನದಲ್ಲಿರುವ ಬಿಬಿಎಲ್ ಫ್ರಾಂಚೈಸಿಗಳನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಭಾರತದಲ್ಲಿ ಪಂದ್ಯ ಆಯೋಜಿಸುವುದರಿಂದ ಭಾರತೀಯ ಹೂಡಿಕೆದಾರರು ಮತ್ತು ಐಪಿಎಲ್ ಫ್ರಾಂಚೈಸಿ ಮಾಲೀಕರ ಗಮನ ಸೆಳೆಯಲು ಸುಲಭವಾಗುತ್ತದೆ. ಆ ಮೂಲಕ ಬಿಬಿಎಲ್ ತಂಡಗಳಿಗೆ ದೊಡ್ಡ ಮಟ್ಟದ ವಿದೇಶಿ ಹೂಡಿಕೆ ತರಲು ಕ್ರಿಕೆಟ್​ ಆಸ್ಟ್ರೇಲಿಯಾದ ಪ್ಲಾನ್ ರೂಪಿಸಿದೆ.

Source link

Leave a Reply

Your email address will not be published. Required fields are marked *