ಮೇ 16ರಂದು ಬೆಂಗಳೂರಿನಲ್ಲಿ ಮುಸ್ಲಿಂ ಸಮಾವೇಶ: ಏನಿದರ ಉದ್ದೇಶ? – Kannada News | Muslim Conference in Bengaluru on May 16: Why Is the Karnataka Muslim Convention Being Held

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 14: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಸಂಬಂಧ ಕಾಂಗ್ರೆಸ್ (Congress) ಹಾಗೂ ಮುಸ್ಲಿಂ ಸಮುದಾಯದ (Muslim community) ನಡುವೆ ಶೀತಲ ಸಮರ ಶುರುವಾಗಿದ್ದು, ಟಿಕೆಟ್ ನೀಡದಿದ್ದಕ್ಕೆ ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಗಳಲ್ಲಿ ಪಾಠ ಕಲಿಸುವುದಾಗಿಯೂ ಸಹ ಎಚ್ಚರಿಕೆ ನೀಡಿದೆ. ಇದು ಕಾಂಗ್ರೆಸ್​​​ ಪಕ್ಷದಲ್ಲಿ ತಲ್ಲಣಗೊಳಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಮುಸ್ಲಿಂ ಸಂಘಟನೆಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಇದೇ ಮೇ 16ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಮುಸ್ಲಿಂ ಸಮಾವೇಶ ಆಯೋಜಿಸಲಾಗಿದ್ದು, ಇದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಮೇ 16 ರಂದು ಬೆಂಗಳೂರಿನಲ್ಲಿ ಕರ್ನಾಟಕ ಮುಸ್ಲಿಂ ಸಮಾವೇಶ
  • ಕಾಂಗ್ರೆಸ್ ಸರಕಾರ ಹೇಳಿದ್ದೇನು, ಮಾಡಿದ್ದೇನು, ಮುಂದೇನು? ಎಂಬ ವರದಿ ಬಿಡುಗಡೆ ಸಿದ್ಧತೆ
  • ಸಮಾವೇಶಕ್ಕೆ ರಾಜಕಾರಣಿಗಳಿಗೆ ಆಹ್ವಾನವಿಲ್ಲ

ಕಾಂಗ್ರೆಸ್ ಸರ್ಕಾರದ 3 ವರ್ಷಗಳ ಕಾರ್ಯವೈಖರಿ ಮತ್ತು ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಭರವಸೆಗಳ ಅನುಷ್ಠಾನ ಕುರಿತ ಸಮಗ್ರ ವರದಿಯನ್ನು ಬಿಡುಗಡೆ ಮಾಡಲು ಮೇ 16ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ‘ಕರ್ನಾಟಕ ಮುಸ್ಲಿಂ ಸಮಾವೇಶ’ ಆಯೋಜಿಸಲಾಗಿದೆ.

ಇದನ್ನೂ ಓದಿ: TV9 Kannada News Live: ಉಪಚುನಾವಣೆ ಗೆದ್ದರೂ ‘ಕೈ’ಗೆ ಹೊಸ ಚಿಂತೆ, ಟಿವಿಕೆ ಮೈತ್ರಿ ಬಗ್ಗೆ ಅಂತೆಕಂತೆ

ಇದಕ್ಕೂ ಮುನ್ನ, ಶಿವಾಜಿನಗರದ ಎಜೆ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ರಾಜ್ಯದ ಪ್ರಮುಖ ಮುಸ್ಲಿಂ ಸಂಘಟನೆಗಳು, ಉಲೇಮಾ ಸಂಘಟನೆಗಳು, ಜಮಾತ್‌ಗಳು, ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ರಾಜ್ಯ ಮುಸ್ಲಿಂ ಒಕ್ಕೂಟದ ಅಡ್‌ಹಾಕ್ ಸಮಿತಿ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಉಲೇಮಾಗಳು, ವಕೀಲರು, ನಿವೃತ್ತ ಅಧಿಕಾರಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿ 75ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ಅಡ್‌ಹಾಕ್ ಸಮಿತಿ ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಸಿದ್ಧಪಡಿಸಿರುವ ‘ಕಾಂಗ್ರೆಸ್ ಸರ್ಕಾರ ಹೇಳಿದ್ದೇನು?, ಮಾಡಿದ್ದೇನು? ಮುಂದೇನು?’ ಎಂಬ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಈ ವರದಿಯಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ನೀಡಿದ್ದ 10 ಪ್ರಮುಖ ಭರವಸೆಗಳು, ಈಡೇರಿದ ಮತ್ತು ಈಡೇರದ ಭರವಸೆಗಳು, ರಾಜಕೀಯ ಪ್ರಾತಿನಿಧ್ಯದಲ್ಲಿನ ತಾರತಮ್ಯ ಕುರಿತು ವಿಶ್ಲೇಷಿಸಲಾಗಿದೆ. ಜೊತೆಗೆ ಹಿಜಾಬ್ ನಿರ್ಬಂಧ, ಮೀಸಲಾತಿ ರದ್ದತಿ, ದ್ವೇಷ ಭಾಷಣ, ದ್ವೇಷ ಅಪರಾಧ, ಬಜೆಟ್ ಹಂಚಿಕೆ, ವಕ್ಫ್ ವಿಷಯ, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ ಮತ್ತು ಶಿಕ್ಷಣ ಕ್ಷೇತ್ರದ ಅನುದಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಲಹೆ-ಬೇಡಿಕೆಗಳನ್ನು ವಿವರವಾಗಿ ಚರ್ಚಿಸಿ, ವರದಿಗೆ ಅಗತ್ಯ ತಿದ್ದುಪಡಿಗಳನ್ನು ಸ್ವೀಕರಿಸಲಾಯಿತು.

ಇದನ್ನೂ ಓದಿ: ನಾಯಕರದ್ದಾಯ್ತು, ಈಗ ಮುಸ್ಲಿಂ ಧಾರ್ಮಿಕ ಮುಖಂಡರ ಸರದಿ: ಕಾಂಗ್ರೆಸ್ ವಿರುದ್ಧ ಭುಗಿಲೆದ್ದ ಆಕ್ರೋಶ

ಕಾಂಗ್ರೆಸ್ ಸರ್ಕಾರ ರಾಜ್ಯದ ಮುಸ್ಲಿಮರನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯವನ್ನು ಹೀಗೆ ನಡೆಸಿಕೊಳ್ಳುವುದನ್ನು ಮುಂದುವರಿಸಿದರೆ, ಸಮುದಾಯವು ತನ್ನ ಆಯ್ಕೆಗಳನ್ನು ಮುಕ್ತವಾಗಿಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಸಮಾವೇಶಕ್ಕೆ ರಾಜಕಾರಣಿಗಳಿಗೆ ಆಹ್ವಾನವಿಲ್ಲ

ಇನ್ನು ಮೇ 16ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆಯಲಿರುವ ಈ ಬೃಹತ್​​ ಮುಸ್ಲಿಂ ಸಮಾವೇಶಕ್ಕೆ ಯಾವುದೇ ರಾಜಕಾರಣಿಗಳಿಗೆ ಆಹ್ವಾನ ನೀಡಿಲ್ಲ. ಬಿಡುಗಡೆಯಾದ ವರದಿಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​, ಸಚಿವರು ಹಾಗೂ ಶಾಸಕರಿಗೆ ತಲುಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *