ಇಂದಿನ ವೇಗದ ಜೀವನಶೈಲಿಯಲ್ಲಿ ಉಳಿದ ಆಹಾರವನ್ನು ಕೆಲವೇ ನಿಮಿಷಗಳಲ್ಲಿ ಬಿಸಿ ಮಾಡಲು ಅಥವಾ ತ್ವರಿತವಾಗಿ ಅಡುಗೆ ಮಾಡಲು ಮೈಕ್ರೋವೇವ್ ಓವನ್ (Microwave) ಅನಿವಾರ್ಯ ಸಾಧನವಾಗಿದೆ. ಆದರೆ ಮೈಕ್ರೋವೇವ್ ಬಳಕೆಯ ಬಗ್ಗೆ ಹಲವು ವರ್ಷಗಳಿಂದ ಅನೇಕ ಗೊಂದಲಗಳು ಹರಿದಾಡುತ್ತಿವೆ. “ಮೈಕ್ರೋವೇವ್‌ನ ರೇಡಿಯೇಷನ್‌ನಿಂದ ಕ್ಯಾನ್ಸರ್ ಬರುತ್ತದೆ”, “ಆಹಾರದಲ್ಲಿನ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ” ಎಂಬಂತಹ ನಂಬಿಕೆಗಳು ಸಾಮಾನ್ಯವಾಗಿವೆ. ಆದರೆ ವೈಜ್ಞಾನಿಕ ಅಧ್ಯಯನಗಳು ಈ ಹೇಳಿಕೆಗಳಿಗೆ ಸಂಪೂರ್ಣ ಬೆಂಬಲ ನೀಡುವುದಿಲ್ಲ. ಸರಿಯಾದ ವಿಧಾನದಲ್ಲಿ ಮೈಕ್ರೋವೇವ್ ಬಳಸಿದರೆ ಅದು ಸುರಕ್ಷಿತವಾಗಿದ್ದು, ಕೆಲವು ಸಂದರ್ಭಗಳಲ್ಲಿ ಪೋಷಕಾಂಶಗಳನ್ನು ಉತ್ತಮವಾಗಿ ಉಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಹಾಗಾದರೆ ಇದು ಹೇಗೆ ಕೆಲಸ ಮಾಡುತ್ತದೆ, ಮೈಕ್ರೋವೇವ್ ಬಳಸುವಾಗ ಪಾಲಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳೇನು ತಿಳಿದುಕೊಳ್ಳಿ.
ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ?
ಮೈಕ್ರೋವೇವ್ ಓವನ್ ನಾನ್-ಐಯೋನೈಜಿಂಗ್ ರೇಡಿಯೇಷನ್ (Non-Ionizing Radiation) ಎಂಬ ಸುರಕ್ಷಿತ ರೇಡಿಯೋ ತರಂಗಗಳನ್ನು ಬಳಸುತ್ತದೆ. ಈ ತರಂಗಗಳು ಆಹಾರದಲ್ಲಿರುವ ನೀರು, ಕೊಬ್ಬು ಮತ್ತು ಸಕ್ಕರೆಯ ಅಣುಗಳನ್ನು ವೇಗವಾಗಿ ಕಂಪಿಸುವಂತೆ ಮಾಡುತ್ತವೆ. ಈ ಘರ್ಷಣೆಯಿಂದ ಉಷ್ಣತೆ ಉತ್ಪತ್ತಿಯಾಗಿ ಆಹಾರ ಬೇಗನೆ ಬಿಸಿಯಾಗುತ್ತದೆ. ಇದು ರೇಡಿಯೋಆಕ್ಟಿವ್ ಕಿರಣಗಳಲ್ಲ. ಆದ್ದರಿಂದ ಆಹಾರವು ರೇಡಿಯೋಆಕ್ಟಿವ್ ಆಗುವುದಿಲ್ಲ ಅಥವಾ ಅದರಲ್ಲಿ ಅಪಾಯಕಾರಿ ವಿಕಿರಣ ಉಳಿಯುವುದಿಲ್ಲ.
ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿದರೆ ಪೋಷಕಾಂಶಗಳು ನಾಶವಾಗುತ್ತವೆಯೇ?
ಯಾವುದೇ ಅಡುಗೆ ವಿಧಾನದಲ್ಲಿ ಆಹಾರವನ್ನು ಬಿಸಿ ಮಾಡಿದಾಗ, ವಿಶೇಷವಾಗಿ ವಿಟಮಿನ್ ಸಿ ಮತ್ತು ಬಿ-ಕಾಂಪ್ಲೆಕ್ಸ್ ಮುಂತಾದ ಉಷ್ಣತೆಗೆ ಸೂಕ್ಷ್ಮವಾದ ಪೋಷಕಾಂಶಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ ಮೈಕ್ರೋವೇವ್‌ನಲ್ಲಿ, ಆಹಾರ ಕಡಿಮೆ ಸಮಯದಲ್ಲಿ ಬಿಸಿಯಾಗುತ್ತದೆ ಜೊತೆಗೆ ಹೆಚ್ಚು ನೀರು ಬಳಸುವ ಅಗತ್ಯವಿರುವುದಿಲ್ಲ. ಅಷ್ಟೇಅಲ್ಲ ಪೋಷಕಾಂಶಗಳು ನೀರಿನಲ್ಲಿ ಕರಗಿ ಹೊರಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಕಾರಣಗಳಿಂದಾಗಿ ಕೆಲವು ಸಂದರ್ಭಗಳಲ್ಲಿ ಸಾಂಪ್ರದಾಯಿಕ ಅಡುಗೆ ವಿಧಾನಗಳಿಗಿಂತ ಮೈಕ್ರೋವೇವ್‌ನಲ್ಲಿ ಬೇಯಿಸಿದ ಆಹಾರದಲ್ಲಿ ಪೋಷಕಾಂಶಗಳು ಹೆಚ್ಚಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಮೈಕ್ರೋವೇವ್ ಬಳಸುವಾಗ ಪಾಲಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು:
- ಸಾಮಾನ್ಯವಾಗಿ ಮೈಕ್ರೋವೇವ್ ನಲ್ಲಿ -ಸೇಫ್ ಗಾಜು ಅಥವಾ ಸೆರಾಮಿಕ್ ಪಾತ್ರೆಗಳನ್ನು ಮಾತ್ರ ಬಳಸಿ.
- ಸಾಮಾನ್ಯ ಪ್ಲಾಸ್ಟಿಕ್ ಡಬ್ಬಿಗಳನ್ನು ಬಳಸಬೇಡಿ. ಬಿಸಿಯಾದಾಗ ಕೆಲವು ಪ್ಲಾಸ್ಟಿಕ್‌ಗಳಿಂದ ರಾಸಾಯನಿಕಗಳು ಆಹಾರಕ್ಕೆ ಸೇರಬಹುದು.
- ಆಹಾರವನ್ನು ಮಧ್ಯದಲ್ಲಿ ಒಮ್ಮೆ ಕಲಸಿ ಅಥವಾ ತಿರುಗಿಸಿ. ಇದರಿಂದ ಎಲ್ಲೆಡೆ ಸಮಾನವಾಗಿ ಬಿಸಿಯಾಗುತ್ತದೆ.
- ಮಾಂಸ, ಮೀನು, ಮೊಟ್ಟೆ ಮೊದಲಾದ ಆಹಾರಗಳು ಸಂಪೂರ್ಣವಾಗಿ ಬಿಸಿಯಾಗದಂತೆ ನೋಡಿಕೊಳ್ಳಿ.
- ಲೋಹದ ಪಾತ್ರೆಗಳು ಅಥವಾ ಅಲ್ಯೂಮಿನಿಯಂ ಫಾಯಿಲ್ ಅನ್ನು ಮೈಕ್ರೋವೇವ್‌ನಲ್ಲಿ ಬಳಸಬೇಡಿ.
- ಮೈಕ್ರೋವೇವ್ ಬಾಗಿಲು ಸರಿಯಾಗಿ ಮುಚ್ಚದಿದ್ದರೆ ಅಥವಾ ಹಾನಿಯಾಗಿದ್ದರೆ ಬಳಸಬಾರದು.
ಇದನ್ನೂ ಓದಿ: ವಯಸ್ಸಿಗೆ ತಕ್ಕ ವ್ಯಾಯಾಮ; 20ರಿಂದ 60+ ವಯಸ್ಸಿನವರಿಗಾಗಿ ಸಂಪೂರ್ಣ ಫಿಟ್ನೆಸ್ ಗೈಡ್
ಯಾವ ಆಹಾರಗಳನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡುವಾಗ ಹೆಚ್ಚು ಎಚ್ಚರಿಕೆ ಅಗತ್ಯ?
ಮಕ್ಕಳ ಆಹಾರ: ಬಿಸಿ ಮಾಡಿದ ನಂತರ ಚೆನ್ನಾಗಿ ಕಲಸಿ ತಾಪಮಾನ ಪರೀಕ್ಷಿಸಿ.
ಮೊಟ್ಟೆ (ಚಿಪ್ಪಿನೊಂದಿಗೆ): ಸಿಡಿಯುವ ಸಾಧ್ಯತೆ ಇದೆ.
ಮುಚ್ಚಿದ ಡಬ್ಬಿಗಳು: ಒತ್ತಡ ಹೆಚ್ಚಾಗಿ ಸ್ಫೋಟವಾಗಬಹುದು.
ಎಣ್ಣೆ ಹೆಚ್ಚು ಇರುವ ಆಹಾರಗಳು: ಅತಿಯಾಗಿ ಬಿಸಿಯಾಗುವ ಸಾಧ್ಯತೆ ಇದೆ.
ಆಹಾರವನ್ನು ಎಷ್ಟು ಬಾರಿ ಬಿಸಿ ಮಾಡಬಹುದು?
ತಜ್ಞರ ಪ್ರಕಾರ, ಬೇಯಿಸಿದ ಆಹಾರವನ್ನು ಸಾಧ್ಯವಾದಷ್ಟು ಒಮ್ಮೆ ಮಾತ್ರ ಬಿಸಿ ಮಾಡುವುದು ಉತ್ತಮ. ಪ್ರತಿಬಾರಿ ಬಿಸಿ-ತಣ್ಣಗೆ ಮಾಡುವುದರಿಂದ ಬ್ಯಾಕ್ಟೀರಿಯಾ ಬೆಳೆಯುವ ಅಪಾಯ ಹೆಚ್ಚಾಗಬಹುದು.
ಉಳಿದ ಆಹಾರವನ್ನು ಹೇಗೆ ಸಂಗ್ರಹಿಸಬೇಕು?
- ಅಡುಗೆ ಮಾಡಿದ ಎರಡು ಗಂಟೆಗಳೊಳಗೆ ಫ್ರಿಜ್‌ಗೆ ಇಡಿ.
- ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ.
- ಮರುಬಿಸಿ ಮಾಡುವಾಗ ಕನಿಷ್ಠ 74°C ತಾಪಮಾನ ತಲುಪುವಂತೆ ಬಿಸಿ ಮಾಡಿ.
ಮೈಕ್ರೋವೇವ್ ಬಳಕೆಯ ಪ್ರಮುಖ ಪ್ರಯೋಜನಗಳು:
- ಸಮಯ ಉಳಿತಾಯ
- ಕಡಿಮೆ ಎಣ್ಣೆಯಲ್ಲಿ ಅಡುಗೆ ಸಾಧ್ಯ
- ಕೆಲವು ಪೋಷಕಾಂಶಗಳು ಉತ್ತಮವಾಗಿ ಉಳಿಯುವ ಸಾಧ್ಯತೆ
- ವಿದ್ಯುತ್ ಬಳಕೆ ಕಡಿಮೆ
- ಆಹಾರವನ್ನು ತ್ವರಿತವಾಗಿ ಬಿಸಿ ಮಾಡಬಹುದು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
