ಮೈಸೂರು, ಜುಲೈ 15: ಮೈಸೂರು ದಸರಾದಲ್ಲಿ ಕಂಬಳ ಆಚರಣೆ ಕುರಿತು ಪರ-ವಿರೋಧ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ, ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಅವರು ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ. 2026ರ ಮೈಸೂರು ದಸರಾದಲ್ಲಿ ಕಂಬಳ ಆಚರಣೆ ಮಾಡುವ ಪ್ರಸ್ತಾಪಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ‘ಟಿವಿ9’ ಜತೆ ಮಾತನಾಡಿದ ಅವರು, ಕಂಬಳವು ಕರಾವಳಿ ಪ್ರದೇಶದ ವಿಶಿಷ್ಟ ಕ್ರೀಡೆಯಾಗಿದ್ದು, ಮೈಸೂರಿನ ಐತಿಹಾಸಿಕ ದಸರಾ ಮಹೋತ್ಸವದ ಭಾಗವಾಗಿರಬಾರದು. ಭಾರತದ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ಅನನ್ಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಉದಾಹರಣೆಗೆ, ದೆಹಲಿಯಲ್ಲಿ ರಾಮಲೀಲಾ, ಬಂಗಾಳದಲ್ಲಿ ದುರ್ಗಾಪೂಜೆ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಯುವಂತೆ, ಮೈಸೂರು ದಸರಾ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. 1610ರಲ್ಲಿ ವಿಜಯನಗರ ಸಾಮ್ರಾಜ್ಯದಿಂದ ಅಳವಡಿಸಿಕೊಂಡು ಮೈಸೂರು ದಸರಾವನ್ನು ವೈಭವೀಕರಿಸಲಾಗಿದ್ದು, ಇದು ಮೈಸೂರಿನ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಕಂಬಳ ಆಯೋಜಿಸಲು 20-30 ಎಕರೆ ಜಮೀನು, ಅರಣ್ಯನಾಶ ಮತ್ತು ಬಯಲು ಸೀಮೆಯನ್ನು ಗದ್ದೆಯನ್ನಾಗಿ ಪರಿವರ್ತಿಸುವಂತಹ ಪರಿಸರ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೆ, ಸಾರ್ವಜನಿಕ ಹಣವನ್ನು ಬಳಸಿ ಕೇವಲ ಎರಡು ದಿನಗಳ ಕ್ರೀಡೆಗೆ ಇಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲಗಳನ್ನು ವ್ಯಯಿಸುವುದು ಸೂಕ್ತವಲ್ಲ. ಕಂಬಳವನ್ನು ಜಾಗತಿಕವಾಗಿ ಪ್ರಚಾರ ಮಾಡಲು ಕರಾವಳಿ ಪ್ರದೇಶದಲ್ಲೇ ಅದನ್ನು ಆಯೋಜಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಪ್ರತಿಯೊಂದು ಆಚರಣೆಯೂ ಅದರ ಮೂಲ ಸ್ಥಳದಲ್ಲಿಯೇ ಹೆಚ್ಚು ಅರ್ಥಪೂರ್ಣ ಎಂದು ಡಾ. ಅಯ್ಯಂಗಾರ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
