ಕ್ರಿಕೆಟ್ ಮೈದಾನದಲ್ಲಿ ಕೆಲವೊಮ್ಮೆ ಗಂಭೀರ ಕ್ಷಣಗಳೂ ಹಾಸ್ಯಮಯವಾಗಿ ಬದಲಾಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಭಾರತ ತಂಡ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಝಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅತ್ಯಂತ ಸುಲಭದ ರನ್-ಔಟ್ ಅವಕಾಶವೊಂದನ್ನು ಕೈಚೆಲ್ಲಿರುವುದು.
ಮೈದಾನದಲ್ಲಿ ನಡೆದಿದ್ದೇನು?
ಝಿಂಬಾಬ್ವೆ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಎಸೆದ ಚೆಂಡನ್ನು ಬ್ಯಾಟರ್ ತಡಿವಾನಾಶೆ ಮಾರುಮಣಿ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ತಳ್ಳಿದರು. ಈ ವೇಳೆ ಇಬ್ಬರು ಝಿಂಬಾಬ್ವೆ ಬ್ಯಾಟರ್‌ಗಳ ನಡುವೆ ರನ್ ಓಡುವಾಗ ಭಾರಿ ಗೊಂದಲ ಉಂಟಾಯಿತು.
ಪರಿಣಾಮವಾಗಿ, ಇಬ್ಬರೂ ಬ್ಯಾಟರ್‌ಗಳು ಬೌಲರ್ ತುದಿಯಲ್ಲೇ ಕ್ರೀಸ್ ಬಿಟ್ಟು ನಿಂತರು. ಇದರಿಂದ ಸ್ಟ್ರೈಕರ್ ತುದಿಯ ವಿಕೆಟ್‌ಗಳು ಸಂಪೂರ್ಣವಾಗಿ ಖಾಲಿಯಿದ್ದವು, ಭಾರತಕ್ಕೆ ರನ್-ಔಟ್ ಮಾಡಲು ಅತ್ಯುತ್ತಮ ಅವಕಾಶವಿತ್ತು.
ಇಶಾನ್ ‘ಬ್ರೈನ್ ಫೇಡ್’ ಕ್ಷಣ:
ಚೆಂಡನ್ನು ಕೈಗೆತ್ತಿಕೊಂಡ ಇಶಾನ್ ಕಿಶನ್, ಅತ್ಯಂತ ಸುಲಭವಾಗಿ ವಿಕೆಟ್‌ಗೆ ಬಾಲ್ ಎಸೆಯಬಹುದಿತ್ತು ಅಥವಾ ತಾವೇ ಒಂದೆಜ್ಜೆ ಮುಂದೆ ಬಂದು ಬೈಲ್ಸ್ ಹಾರಿಸಬಹುದಿತ್ತು. ಆದರೆ, ಅವರು ಬ್ಯಾಟರ್ ಈಗಾಗಲೇ ಕ್ರೀಸ್ ತಲುಪಿದ್ದಾನೆ ಎಂದು ತಪ್ಪು ತಿಳುವಳಿಕೆ ಮಾಡಿಕೊಂಡರು. ಹೀಗಾಗಿ ತೀರಾ ಉದಾಸೀನತೆಯಿಂದ ಚೆಂಡನ್ನು ವಿಕೆಟ್ ಕಡೆಗೆ ರೋಲ್ ಮಾಡಿದರು.
ಆದರೆ ಆ ಥ್ರೋ ವಿಕೆಟ್‌ಗೂ ತಗುಲಲಿಲ್ಲ, ಇತ್ತ ಬ್ಯಾಕಪ್ ಮಾಡಲು ನಿಂತಿದ್ದ ರವಿ ಬಿಷ್ಣೋಯ್ ಕೈಗೂ ಚೆಂಡು ಸಿಗಲಿಲ್ಲ. ಅಷ್ಟರಲ್ಲಿ ಝಿಂಬಾಬ್ವೆ ಬ್ಯಾಟರ್ ಕ್ರೀಸ್ ತಲುಪಿ ಬಚಾವಾದರು. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಇಶಾನ್ ಕಿಶನ್ ತಲೆ ಮೇಲೆ ಕೈ ಹೊತ್ತು ನಿಂತರು.
WHAT WAS THAT @ishankishan51? 😭#ZIMvIND #IndiaCricket #RokoNahiThoko pic.twitter.com/MokE5TOXxn
— FanCode (@FanCode) July 25, 2026
‘ಮೈ ಬ್ಯಾಡ್’ ಎಂದು ನಗೆ ಬೀರಿದ ಕಿಶನ್!
ಈ ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾತನಾಡಿದ ಇಶಾನ್ ಕಿಶನ್, ಬ್ಯಾಟರ್ ಈಗಾಗಲೇ ಕ್ರೀಸ್ ಒಳಗಡೆ ಬಂದಿದ್ದಾನೆ ಎಂದು ನಾನು ಭಾವಿಸಿದ್ದೆ, ಅದು ನನ್ನ ತಪ್ಪು. ಮುಂದಿನ ಬಾರಿ ಖಂಡಿತಾ ಬೈಲ್ಸ್ ಕಡೆಗೆ ಗಮನ ಹರಿಸುತ್ತೇನೆ ಎಂದಿದ್ದಾರೆ.
ಗೆದ್ದು ಬೀಗಿದ ಟೀಮ್ ಇಂಡಿಯಾ:
ಈ ಸಣ್ಣ ಯಡವಟ್ಟನ್ನು ಹೊರತುಪಡಿಸಿದರೆ ಇಶಾನ್ ಕಿಶನ್ ಪಂದ್ಯದ ಅಸಲಿ ಹೀರೋ ಆಗಿದ್ದರು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಅವರು ಕೇವಲ 44 ಎಸೆತಗಳಲ್ಲಿ 81 ರನ್ ಚಚ್ಚಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದರು.
ಇದನ್ನೂ ಓದಿ: ಬ್ಯಾಟಿಂಗ್ ಮಾತ್ರ ‘ರಕನಾಕ’ ಆಗಿತ್ತು: ಶ್ರೇಯಸ್ ಅಯ್ಯರ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 219 ರನ್‌ಗಳ ಬೃಹತ್ ಮೊತ್ತ ಪೇರಿಸಿದರೆ, ಝಿಂಬಾಬ್ವೆ ತಂಡ 129 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 90 ರನ್‌ಗಳ ಭರ್ಜರಿ ಜಯ ಸಾಧಿಸಿ, 3 ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
