ಮೊಬೈಲ್ ಅತಿಯಾಗಿ ಬಳಸಿದ್ರೆ ಮಣಿಕಟ್ಟು ನೋವು ಬರುತ್ತಾ? ಹಾಗಿದ್ರೆ ನೀವು ಈ ಸಿಂಡ್ರೋಮ್ ಬಗ್ಗೆ ತಿಳಿಯಲೇಬೇಕು – Kannada News | How Excessive Screen Time Is Damaging Your Wrist Health

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಹಾಗೂ ಗೇಮಿಂಗ್ ಸಾಧನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇವುಗಳ ಅತಿಯಾದ ಬಳಕೆ ಮಣಿಕಟ್ಟಿನ (Wrist) ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತು ಮೊಬೈಲ್‌ ಹೆಚ್ಚು ಬಳಸುವವರಲ್ಲಿ ‘ಕಾರ್ಪಲ್ ಟನಲ್ ಸಿಂಡ್ರೋಮ್’ (CTS) ಸಮಸ್ಯೆ ಹೆಚ್ಚುತ್ತಿದೆ. ಹೆಸರು ಕೇಳಿದಾಗ ವಿಚಿತ್ರ ಎನಿಸಬಹುದು ಆದರೆ ಇದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಹಾಗಾದರೆ ಕಾರ್ಪಲ್ ಟನಲ್ ಸಿಂಡ್ರೋಮ್ ಎಂದರೇನು, ಲಕ್ಷಣಗಳು ಹೇಗಿರುತ್ತವೆ ಮತ್ತು ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾರ್ಪಲ್ ಟನಲ್ ಸಿಂಡ್ರೋಮ್ ಎಂದರೇನು?

ನಮ್ಮ ಮಣಿಕಟ್ಟಿನೊಳಗೆ ‘ಕಾರ್ಪಲ್ ಟನಲ್’ ಎಂಬ ಸಣ್ಣ ದಾರಿ ಇರುತ್ತದೆ. ಇದರ ಮೂಲಕ ‘ಮೀಡಿಯನ್ ನರ್ವ್’ ಎಂಬ ಪ್ರಮುಖ ನರ ಸಾಗುತ್ತದೆ. ಗಂಟೆಗಳ ಕಾಲ ಟೈಪಿಂಗ್ ಮಾಡುವುದು, ಫೋನ್ ಸ್ಕ್ರೋಲ್ ಮಾಡುವುದು ಅಥವಾ ಗೇಮಿಂಗ್ ನಲ್ಲಿ ಮುಳುಗಿರುವುದರಿಂದ ಮಣಿಕಟ್ಟಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ನರ ಒತ್ತಡಕ್ಕೆ ಒಳಗಾಗಿ ಕಾರ್ಪಲ್ ಟನಲ್ ಸಿಂಡ್ರೋಮ್ (CTS) ಉಂಟಾಗುತ್ತದೆ. ಇದು ಮಣಿಕಟ್ಟು, ಕೈ ಮತ್ತು ಬೆರಳುಗಳಲ್ಲಿ ನೋವು, ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆಯನ್ನು ಉಂಟುಮಾಡುತ್ತದೆ.

ಮುಖ್ಯ ಲಕ್ಷಣಗಳು:

  • ಬೆರಳುಗಳಲ್ಲಿ ಸುಡುವ ಭಾವನೆ
  • ಮಣಿಕಟ್ಟಿನಲ್ಲಿ ನಿರಂತರ ನೋವು ಕಾಣಿಸಿಕೊಳ್ಳುವುದು
  • ವಸ್ತುಗಳನ್ನು ಗಟ್ಟಿಯಾಗಿ ಹಿಡಿಯಲು ಕಷ್ಟವಾಗುವುದು
  • ಕೈ ಬಲ ಕುಂಠಿತವಾಗುವುದು
  • ವಿಶೇಷವಾಗಿ ರಾತ್ರಿ ಸಮಯದಲ್ಲಿ ನೋವು ಹೆಚ್ಚಾಗುವುದು

ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ನರಗಳಿಗೆ ಶಾಶ್ವತ ಹಾನಿಯಾಗುವ ಅಪಾಯವಿದೆ. ಮಧುಮೇಹ, ಥೈರಾಯ್ಡ್ ಸಮಸ್ಯೆ ಅಥವಾ ಅತಿಯಾದ ತೂಕ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಊಟ ಮಾಡುವಾಗ ಫೋನ್ ಬಳಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ಕರುಳಿನ ಆರೋಗ್ಯ ಹಾಳಾಗುತ್ತೆ ಹುಷಾರ್!

ಸಮಸ್ಯೆ ತಡೆಯಲು ಏನು ಮಾಡಬೇಕು?

ಪ್ರತಿ 45 ರಿಂದ 60 ನಿಮಿಷಕ್ಕೊಮ್ಮೆ ಕೆಲಸದಿಂದ ಸಣ್ಣ ವಿರಾಮ ತೆಗೆದುಕೊಳ್ಳಬೇಕು. ಟೈಪಿಂಗ್ ಮಾಡುವಾಗ ಮಣಿಕಟ್ಟನ್ನು ಸಹಜ ಸ್ಥಿತಿಯಲ್ಲಿ ಇರಿಸಬೇಕು. ಎರ್ಗೋನಾಮಿಕ್ ಕೀಬೋರ್ಡ್ ಮತ್ತು ಮೌಸ್ ಬಳಸುವುದು ಉತ್ತಮ. ಮಣಿಕಟ್ಟು ಹಾಗೂ ಬೆರಳಿನ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು. ಸಾಧ್ಯವಾದಷ್ಟು ವಾಯ್ಸ್ ಟೈಪಿಂಗ್ ಬಳಸುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಮಣಿಕಟ್ಟು ನೋವು ಅಥವಾ ಬೆರಳುಗಳಲ್ಲಿ ಜುಮ್ ಎನಿಸುವ ಸಮಸ್ಯೆ ಮುಂದುವರಿದರೆ ಅದನ್ನು ಸಾಮಾನ್ಯ ದಣಿವು ಎಂದು ನಿರ್ಲಕ್ಷ್ಯ ಮಾಡಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *