ಮೋಡ ಬಿತ್ತನೆಗೆ ಚಾಲನೆ ಬೆನ್ನಲ್ಲೇ ಸುರಿದ ಮಳೆ: ಪ್ರಯತ್ನ ಫಲ ನೀಡಿದೆ ಎಂದ ಶಾಸಕ; ರೈತರೂ ಖುಷ್​ – Kannada News | Rain falls after cloud seeding begins; MLA says the effort has paid off; farmers also happy

ಹುಬ್ಬಳ್ಳಿ, ಜುಲೈ 06: ಎಲ್ ನಿನೋ ಪರಿಣಾಮದಿಂದ ಈ ಬಾರಿ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಕೊರತೆಯಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯದ ಹಲವಡೆ ಮಳೆಯಾಗುತ್ತಿದ್ದರೂ ಜನರ ಸಂತಸವನ್ನು ಇಮ್ಮಡಿಗೊಳಿಸಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷಿತ ಮಳೆ ಆಗದಿರುವುದರಿಂದ ಮೋಡ ಬಿತ್ತನೆ (Cloud Seeding) ಕೂಡ ಆರಂಭವಾಗಿದೆ. ಹಾವೇರಿ (haveri) ಜಿಲ್ಲೆಯ ಶಾಸಕರು ತಮ್ಮ ಸ್ವಂತ ಹಣದಿಂದ ಜಿಲ್ಲೆಯಾದ್ಯಂತ ಮೋಡ ಬಿತ್ತನೆ ಮಾಡಿಸುತ್ತಿದ್ದು, ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗಿದೆ.

ರೈತರ ನೆರವಿಗೆ ಮುಂದಾದ ಹಾವೇರಿ ಜಿಲ್ಲೆಯ ಶಾಸಕರು

ರಾಜ್ಯದ ಹಲವಡೆ ಇದೀಗ ತಕ್ಕಮಟ್ಟಿಗೆ ಮಳೆಯಾಗುತ್ತಿದೆ. ಕರವಾಳಿ ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರು ಕೂಡ ಉತ್ತರ ಕರ್ನಾಟಕದ ಬಹುತೇಕ ಕಡೆ ನಿರೀಕ್ಷಿತ ಮಳೆಯಾಗುತ್ತಿಲ್ಲ. ಕೆಲವಡೆ ಮಳೆ ಬಂದರೂ ಅದು ಯಾವುದಕ್ಕೂ ಸಾಲದಂತಾಗಿದೆ. ಇದು ರೈತರ ಆತಂಕವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಹತ್ತಿ ಮಣಸಿನಕಾಯಿ ಬಿತ್ತನೆ ಮಾಡಿದ್ದ ರೈತರು, ಮಳೆ ನೋಡುತ್ತಾ ಕೂತಿದ್ದಾರೆ. ಆದರೆ ಇಂತಹ ಸಮಯದಲ್ಲಿ ರೈತರ ನೆರವಿಗೆ ಹಾವೇರಿ ಜಿಲ್ಲೆಯ ಶಾಸಕರು ಮುಂದಾಗಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಮೋಡ ಬಿತ್ತನೆಗೆ ತೀರ್ಮಾನ: 1 ಗಂಟೆ ಮೋಡ ಬಿತ್ತನೆಗೆ ಎಷ್ಟು ಖರ್ಚು? ವಿವರಿಸಿದ ಶಾಸಕ ಪ್ರಕಾಶ್ ಕೋಳಿವಾಡ

ಹಾವೇರಿ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಮೋಡ ಬಿತ್ತನೆಗೆ ನಿರ್ಧಾರಿಸಿದ್ದಾರೆ. ಅದರಂತೆ ಇಂದು ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು. ಮೋಡ ಬಿತ್ತನೆ ಮಾಡುವ ವಿಮಾನಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು. ಹುಬ್ಬಳ್ಳಿಯಿಂದ ಟೇಕ್ ಆಫ್ ಆದ ವಿಮಾನ, ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಹಾನಗಲ್, ರಾಣೆಬೆನ್ನೂರು, ಸವಣೂರು, ಹಾವೇರಿ ಸೇರಿದಂತೆ ಅನೇಕ ಕಡೆ ಮೋಡ ಬಿತ್ತನೆ ಮಾಡಲಾಯಿತು.

15 ಲಕ್ಷ ರೂ ಖರ್ಚು

ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ವಿಶೇಷ ಆಸಕ್ತಿ ವಹಿಸಿ ಮೋಡ ಬಿತ್ತನೆ ನೇತೃತ್ವ ವಹಿಸಿಕೊಂಡಿದ್ದಾರೆ. ತಮ್ಮದೇ ಪಾಲುದಾರಿಕೆಯ ಒಡೆತನದ ಸಂಸ್ಥೆಯ ವಿಮಾನದ ಮೂಲಕ ಮೋಡ ಬಿತ್ತನೆ ಮಾಡಿಸುತ್ತಿದ್ದಾರೆ. ಇನ್ನು ಎಲ್ಲೆಲ್ಲಿ ತೇವಾಂಶವಿರುವ ಮೋಡಗಳು ಇರುತ್ತವೋ ಅಲ್ಲಿ ಸಿಲ್ವರ್ ಅಯೋಡೈಡ್ ಕೆಮಿಕಲ್ ಸೇರಿದಂತೆ ಇನ್ನಿತರ ರಾಸಾಯನಿಕಗಳನ್ನು ಸಿಂಪಡಣೆ ಮಾಡಲಾಯ್ತು. ಒಂದು ಗಂಟೆ ಮೋಡ ಬಿತ್ತನೆಗೆ ಬರೋಬ್ಬರಿ 15 ಲಕ್ಷ ರೂ ವೆಚ್ಚ ತಗುಲುತ್ತದೆ.

ಹಾವೇರಿ ಜಿಲ್ಲೆಯ ಹಲವಡೆ ಮಳೆಯಾಗಿದೆ: ಮೋಡ ಬಿತ್ತನೆ ಪ್ರಯತ್ನ ಫಲ ನೀಡಿದೆ ಎಂದ ಶಾಸಕ ಪ್ರಕಾಶ್ ಕೋಳಿವಾಡ

ಮೂರು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲು ನಿರ್ಧರಿಸಲಾಗಿದೆಯಂತೆ. ಈ ಬಗ್ಗೆ ಮಾತನಾಡಿರುವ ಶಾಸಕ ಪ್ರಕಾಶ್ ಕೋಳಿವಾಡ, ಒಂದು ತಿಂಗಳ ಕಾಲ ಮೋಡ ಬಿತ್ತನೆ ಮಾಡುವ ವಿಮಾನ ಹುಬ್ಬಳ್ಳಿಯಲ್ಲಿಯೇ ಇರಲಿದೆ. ಆರಂಭದಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಮಾಡಲಾಗುತ್ತದೆ. ನಂತರ ಪರಿಸ್ಥಿತಿ ಮತ್ತು ಅವಶ್ಯಕತೆ ನೋಡಿಕೊಂಡು ಮೋಡ ಬಿತ್ತನೆ ಮಾಡಲಾಗುವುದು. ಇಂದು ಮೋಡ ಬಿತ್ತನೆಯಿಂದ ಹಾವೇರಿ ಜಿಲ್ಲೆಯ ಹಲವಡೆ ಮಳೆಯಾಗಿದ್ದು, ಪ್ರಯತ್ನ ಫಲ ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಮಾಯವಾಯ್ತು ಮುಂಗಾರು, ಹೇಳತೀರದಾಯ್ತು ಅನ್ನದಾತರ ಸ್ಥಿತಿ

ಉತ್ತರ ಕರ್ನಾಟಕ ಭಾಗದ ರೈತರು ಮಳೆಯಾಗದಿರುವುದರಿಂದ ಸಂಕಷ್ಟದಲ್ಲಿದ್ದರು. ಆದರೆ ಈ ಸಮಯದಲ್ಲಿ ನೆರವಿಗೆ ಬರಬೇಕಾದ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಇದೀಗ ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳೇ ತಮ್ಮ ಸ್ವಂತ ಹಣದಿಂದ ಮೋಡ ಬಿತ್ತನೆ ಮಾಡಿಸುತ್ತಿದ್ದಾರೆ. ಹಲವಡೆ ಮಳೆ ಕೂಡ ಆಗಿದ್ದು, ಸಂತಸ ತಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *