ಮೋದಿ 5 ದಿನಗಳ ಐರೋಪ್ಯ ಪ್ರವಾಸದಲ್ಲಿ ‘ಭಾರತ್ ಇನ್ನೋವೇಟ್ಸ್’; ಹೂಡಿಕೆದಾರರೊಂದಿಗೆ ಪ್ರಧಾನಿ ಸಂವಾದ – Kannada News | Modi in Nice: Bharat Innovates 2026 Summit Unites Indian Startups & Global Investors

ನೀಸ್ (ಫ್ರಾನ್ಸ್), ಜೂನ್ 14: ಐದು ದಿನಗಳ ಐರೋಪ್ಯ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫ್ರಾನ್ಸ್​ನ ಎರಡನೇ ಅತಿದೊಡ್ಡ ನಗರಿ ನೀಸ್​ಗೆ ಆಗಮಿಸಿದ್ದಾರೆ. ಇಲ್ಲಿ ಅವರು ಹೂಡಿಕೆದಾರರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ನೀಸ್ ನಗರದಲ್ಲಿ ನಡೆಯಲಿರುವ ‘ಭಾರತ್ ಇನ್ನೋವೇಟ್ಸ್ 2026’ (Bharat Innovates 2026) ಸಮಾವೇಶದ ಉದ್ಘಾಟನೆಗೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಾಗತಿಕ ಹೂಡಿಕೆದಾರರು ಹಾಗೂ ವೆಂಚರ್ ಕ್ಯಾಪಿಟಲಿಸ್ಟ್‌ಗಳೊಂದಿಗೆ ಉನ್ನತ ಮಟ್ಟದ ಸಂವಾದ ನಡೆಸಿದರು. ಭಾರತದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್‌ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಮಹತ್ವದ ಸಮಾವೇಶ ಇದಾಗಿದೆ. ಪ್ರಧಾನಿ ನಡೆಸಿದ ಈ ಸಂವಾದದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್ ಉಪಸ್ಥಿತರಿದ್ದರು.

ಪ್ರಮುಖ ಉದ್ಯಮಿಗಳ ಭಾಗವಹಿಸುವಿಕೆ

ಪ್ರಧಾನಿ ಮೋದಿ ಅವರೊಂದಿಗೆ ನಡೆದ ಈ ಸಂವಾದದಲ್ಲಿ ಓಯೋ ರೂಮ್ಸ್ (OYO Rooms) ಸಿಇಒ ರಿತೇಶ್ ಅಗರ್ವಾಲ್ ಮತ್ತು ಪ್ರಮುಖ ಭಾರತೀಯ ಉದ್ಯಮಿ ರೋನಿ ಸ್ಕ್ರೂವಾಲಾ ಸೇರಿದಂತೆ ಹಲವು ಜಾಗತಿಕ ಹೂಡಿಕೆದಾರರು ಹಾಗೂ ನಾವೀನ್ಯತೆ (Innovation) ವಲಯದ ಮುಖಂಡರು ಭಾಗವಹಿಸಿದ್ದರು. ಭಾರತ ಮತ್ತು ಫ್ರಾನ್ಸ್ ನಡುವೆ ಪ್ರಸ್ತುತ ನಡೆಯುತ್ತಿರುವ ‘ಇಂಡೋ-ಫ್ರೆಂಚ್ ನಾವೀನ್ಯತೆ ವರ್ಷ’ದ (India-France Year of Innovation) ಭಾಗವಾಗಿ ಈ ಸಮಾವೇಶ ಆಯೋಜನೆಗೊಂಡಿದ್ದು, ಎರಡೂ ದೇಶಗಳ ತಾಂತ್ರಿಕ ಪಾಲುದಾರಿಕೆಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.

ಇದನ್ನೂ ಓದಿ: ಆಂತ್ರೋಪಿಕ್​ನ ಬಲಿಷ್ಠ ಎಐ ಮಾಡಲ್​ಗಳು ಅಮೆರಿಕನ್ನೇತರರಿಗೆ ಅಲಭ್ಯ; ಭಾರತಕ್ಕೆ ಇದು ಎಚ್ಚರಿಕೆಯ ಕರೆಗಂಟೆಯಾ?

ಸಮಾವೇಶದ ಅಜೆಂಡಾಗಳು

ಕೇಂದ್ರ ಶಿಕ್ಷಣ ಸಚಿವಾಲಯದ ಉಸ್ತುವಾರಿಯಲ್ಲಿ ಜೂನ್ 14 ರಿಂದ ಜೂನ್ 16 ರವರೆಗೆ ನಡೆಯಲಿರುವ ಈ ಮೂರು ದಿನಗಳ ಬೃಹತ್ ಸಮಾವೇಶದಲ್ಲಿ ಹಲವು ನಿರೀಕ್ಷೆಗಳು ಮತ್ತು ಕಾರ್ಯಕ್ರಮಗಳಿವೆ. ಭಾರತದ 120 ಕ್ಕೂ ಹೆಚ್ಚು ಮುಂಚೂಣಿಯ ‘ದೀಪ್-ಟೆಕ್’ (Deep-tech) ಸ್ಟಾರ್ಟ್‌ಅಪ್‌ಗಳು ತಮ್ಮ ತಂತ್ರಜ್ಞಾನವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುತ್ತಿವೆ.

ಭಾರತದ ಪ್ರತಿಷ್ಠಿತ ಐಐಟಿಗಳು (IITs) ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿವೆ. ಜಗತ್ತಿನ ವಿವಿಧ ದೇಶಗಳ 500 ಕ್ಕೂ ಹೆಚ್ಚು ಪ್ರಮುಖ ಹೂಡಿಕೆದಾರರು, ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಹಾಗೂ ಜಾಗತಿಕ ಸಿಇಒಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಸೆಮಿಕಂಡಕ್ಟರ್‌ಗಳು, ಅಡ್ವಾನ್ಸ್ಡ್ ಕಂಪ್ಯೂಟಿಂಗ್, ಬಾಹ್ಯಾಕಾಶ ತಂತ್ರಜ್ಞಾನ (Space Tech), ಬಯೋಟೆಕ್ನಾಲಜಿ, ಹೆಲ್ತ್‌ಕೇರ್ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ 13 ಪ್ರಮುಖ ಭವಿಷ್ಯದ ತಂತ್ರಜ್ಞಾನ ವಲಯಗಳ ಮೇಲೆ ಈ ಸಮಾವೇಶ ಬೆಳಕು ಚೆಲ್ಲಲಿದೆ.

ಇದನ್ನೂ ಓದಿ: ವಿಶ್ವದಲ್ಲೇ ಅತಿದೊಡ್ಡ ರಸ್ತೆ ಜಾಲ ಹೊಂದಿದ ದೇಶವೆಂಬ ದಾಖಲೆ ಭಾರತಕ್ಕೆ

ಮ್ಯಾಕ್ರಾನ್ ಜೊತೆ ದ್ವಿಪಕ್ಷೀಯ ಮಾತುಕತೆ

ನಿನ್ನೆ ಶನಿವಾರವಷ್ಟೇ ಫ್ರಾನ್ಸ್‌ಗೆ ಆಗಮಿಸಿರುವ ಪ್ರಧಾನಿ ಮೋದಿ ಅವರು, ಭಾರತ್ ಇನ್ನೋವೇಟ್ಸ್ ಸಮಾವೇಶವನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ತದನಂತರ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಕಳೆದ ಫೆಬ್ರವರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಹಾಗೂ ರಕ್ಷಣೆ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚಿಸಲಿದ್ದಾರೆ.

ಐದು ದಿನಗಳ ಯುರೋಪ್ ಪ್ರವಾಸದ ಮೊದಲ ಹಂತವಾಗಿ ಫ್ರಾನ್ಸ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಇಲ್ಲಿನ ಕಾರ್ಯಕ್ರಮಗಳ ಬಳಿಕ ಸ್ಲೋವಾಕಿಯಾ ದೇಶಕ್ಕೆ ತೆರಳಲಿದ್ದಾರೆ. ತದನಂತರ ಜೂನ್ 16-17 ರಂದು ಎವಿಯನ್‌ನಲ್ಲಿ ನಡೆಯಲಿರುವ ಜಿ-7 (G7) ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತೆ ಫ್ರಾನ್ಸ್‌ಗೆ ಮರಳಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *